ಕಾರವಾರ: ಜೆಡಿಎಸ್ ಹಾಗೂ ಪಕ್ಷೇತರರ ಬೇಷರತ್ ಬೆಂಬಲ ಪಡೆದಿರುವ ಬಿಜೆಪಿ ಕಾರವಾರ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ. ಆದರೆ ಬೆಂಬಲ ನೀಡಿದವರು ಸೇರಿದಂತೆ ಪಕ್ಷದ ಸದಸ್ಯರನ್ನು ಕಾಂಗ್ರೆಸ್ ಸೆಳೆಯುವ ಆತಂಕದಲ್ಲಿ ಬಿಜೆಪಿ ರೆಸಾರ್ಟ್ ರಾಜಕೀಯ ನಡೆಸಿದ್ದು, ಸದಸ್ಯರನ್ನು ಗೋವಾಗೆ ಕರೆದುಕೊಂಡು ಹೋಗಲಾಗಿದೆ.
ಕಾರವಾರದಲ್ಲಿ ನಗರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆಗೆ ಚುನಾವಣಾ ಕಣ ರಂಗೇರಿದೆ. ವಿಧಾನಸಭೆ ಚುನಾವಣೆಗಳಲ್ಲಿ ಸರ್ಕಾರ ಬೀಳಿಸಲು ಬಳಸಲಾಗುತ್ತಿದ್ದ ರೆಸಾರ್ಟ್ ರಾಜಕೀಯದ ಅಸ್ತ್ರ ಈಗ ಕಾರವಾರ ನಗರಸಭೆಯ ಈ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಗೂ ಬಳಕೆಯಾಗಿದೆ.
ಕಾರವಾರ ನಗರಸಭೆ ಸದಸ್ಯರು ಗೋವಾಗೆ ಶಿಫ್ಟ್ ಶುಕ್ರವಾರ ಕಾರವಾರ ಶಾಸಕಿ ರೂಪಾಲಿ ನಾಯ್ಕ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕಾರವಾರ ನಗರಸಭೆಯ ಅಧ್ಯಕ್ಷ ಅಭ್ಯರ್ಥಿಯನ್ನಾಗಿ ಡಾ.ನಿತಿನ್ ಪಿಕಳೆ ಹಾಗೂ ಉಪಾಧ್ಯಕ್ಷ ಅಭ್ಯರ್ಥಿಯನ್ನಾಗಿ ಪ್ರಕಾಶ್ ನಾಯ್ಕ ಅವರನ್ನು ಅಂತಿಮಗೊಳಿಸಲಾಗಿದೆ. ಆದರೆ, ಭಾನುವಾರವೇ ಚುನಾವಣೆ ನಡೆಯುವ ಕಾರಣ ಶನಿವಾರ ಈ ಇಬ್ಬರು ಅಭ್ಯರ್ಥಿಗಳನ್ನೂ ಒಳಗೊಂಡು ನಗರಸಭೆ ಬಿಜೆಪಿ ಬೆಂಬಲಿತ 11 ಸದಸ್ಯರು, ಐವರು ಪಕ್ಷೇತರರು ಹಾಗೂ ಜೆಡಿಎಸ್ ನ ನಾಲ್ವರು ಸದಸ್ಯರನ್ನು ಶಾಸಕಿ ರೂಪಾಲಿ ನಾಯ್ಕ ನೇತೃತ್ವದಲ್ಲಿ ಗೋವಾದ ಕಾನಕೋಣ ರೆಸಾರ್ಟ್ ಗೆ ಕರೆದುಕೊಂಡು ಹೋಗಲಾಗಿದೆ.
ಚುನಾವಣೆಗೆ ಇನ್ನು ಒಂದು ದಿನ ಇರುವಾಗ ಯಾರಾದರೂ ಸದಸ್ಯರು ಮನಸ್ಸು ಬದಲಿಸಿ ಬಿಜೆಪಿಯ ವಿರುದ್ಧ ಮತ ಚಲಾಯಿಸಬಹುದು ಎಂಬ ಕಾರಣಕ್ಕೆ, ಮನಸ್ಸು ಬದಲಿಸಲು ಕೂಡ ಅವಕಾಶ ನೀಡಬಾರದೆಂಬುದೇ ಈ ರೆಸಾರ್ಟ್ ರಾಜಕೀಯದ ಉದ್ದೇಶ ಎನ್ನಲಾಗಿದೆ.
ಸದ್ಯ ಬಿಜೆಪಿಯ ಈ ರೆಸಾರ್ಟ್ ರಾಜಕೀಯ ಕಾರವಾರದಲ್ಲಿ ಭಾರೀ ಸದ್ದು ಮಾಡಿದೆ. ಭಾನುವಾರ ಮಧ್ಯಾಹ್ನ 12ಕ್ಕೆ ಚುನಾವಣೆ ನಡೆಯಲಿದ್ದು, ಚುನಾವಣೆಯಲ್ಲಿ ಏನಾಗಲಿದೆ ಎಂಬ ಕುತೂಹಲ ಈಗ ಎಲ್ಲರಲ್ಲೂ ಮೂಡಿದೆ.