ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಕಾರವಾರ: ಚುನಾವಣೆ ಸಮೀಪಿಸುತ್ತಿದ್ದಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆ ಚುರುಕುಗೊಂಡಿದೆ. ಈ ಬಾರಿ ಅಧಿಕಾರಕ್ಕೆ ಏರಲೇಬೇಕೆಂದು ಪಣ ತೊಟ್ಟಿರುವ ಆಡಳಿತಾರೂಢ ಬಿಜೆಪಿ ಜಿಲ್ಲೆಯಲ್ಲಿ ತನ್ನ ರಣತಂತ್ರವನ್ನು ಪ್ರಾರಂಭಿಸಿದೆ. ಅದರ ಒಂದು ಭಾಗವಾಗಿ ಈ ಬಾರಿ ಮಹಿಳೆಯರ ಮತದ ಮೇಲೆ ಕಣ್ಣಿಟ್ಟ ಬಿಜೆಪಿ ಜಿಲ್ಲೆಯ ಮಹಿಳೆಯರನ್ನು ಒಂದುಗೂಡಿಸಿ ನಾರಿಶಕ್ತಿ ಸಮಾವೇಶ ಮಾಡಿದೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.
ಹೌದು, ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಚಟುವಟಿಕೆ ಚುರುಕುಗೊಂಡಿದೆ. ಈ ಬಾರಿ ಆಡಳಿತಕ್ಕೆ ಬರಲೇಬೇಕು ಎಂದು ಆಡಳಿತಾರೂಢ ಬಿಜೆಪಿ ಒಂದು ಕಡೆ ಪ್ರಯತ್ನಕ್ಕೆ ಇಳಿದರೆ, ಇನ್ನೊಂದೆಡೆ ಪ್ರಂಚರತ್ನ ಯಾತ್ರೆಯ ಮೂಲಕ ಜೆಡಿಎಸ್, ಪ್ರಜಾಧ್ವನಿ ಯಾತ್ರೆಯ ಮೂಲಕ ಕಾಂಗ್ರೆಸ್ ಪ್ರಯತ್ನಕ್ಕೆ ಇಳಿದಿದೆ. ಇನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಮಹಿಳೆಯರ ಮತದ ಮೇಲೆ ಕಣ್ಣಿಟ್ಟು ಮಹಿಳಾ ಸಮಾವೇಶದ ಮೂಲಕ ಪಕ್ಷದತ್ತ ಮಹಿಳೆಯರನ್ನ ಸೆಳೆಯುವ ಕಾರ್ಯಕ್ಕೆ ಇಳಿದಿದೆ.
ಇಂದು ಕಾರವಾರ ನಗರದ ಮಿತ್ರಸಮಾಜದಲ್ಲಿ ಜಿಲ್ಲಾ ಮಹಿಳಾ ಬೃಹತ್ ಸಮಾವೇಶವನ್ನ ಪಕ್ಷದಿಂದ ಆಯೋಜನೆ ಮಾಡಲಾಗಿತ್ತು. ಮಹಿಳೆಯರಿಗೆ ಬಿಜೆಪಿಯತ್ತ ಸೆಳೆಯುವ ಹಾಗೂ ಸಂಘಟನಾತ್ಮಕ ಚಟುವಟಿಕೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುವ ಜೊತೆಗೆ ಬಿಜೆಪಿ ಗೆಲುವಿಗೆ ಮಹಿಳೆಯರಿಂದ ಮಾರ್ಗದರ್ಶನ ಪಡೆಯುವ ಉದ್ದೇಶದಿಂದ ಸಮಾವೇಶ ಆಯೋಜನೆ ಮಾಡಲಾಗಿತ್ತು.
ಈ ವೇಳೆ, ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆಗಳನ್ನು ಮಹಿಳೆಯರಿಗೆ ತಿಳಿಸುವ ಪ್ರಯತ್ನ ಮಾಡಿದರು. ಈ ಬಾರಿ ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕು. ಈ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾದ ಬಳಿಕ ಶೇ. 50 ಕ್ಕಿಂತಲೂ ಕಡಿಮೆಯಾಗದಂತೆ ಮಹಿಳೆಯರಿಗೆ ಮೀಸಲಾತಿ ಕಲ್ಪಿಸಿದ್ದರು.
ಮೋದಿ ಅವರ ಸೇವೆಯನ್ನು ಎಲ್ಲೆಡೆ ಸ್ಮರಿಸಲಾಗುತ್ತಿದೆ:ನಿವೇಶನ ಸೇರಿದಂತೆ ಸರ್ಕಾರಿ ಸೌಲಭ್ಯಗಳನ್ನು ಮಹಿಳೆಯರಿಗೆ ನೀಡುವ ಮೂಲಕ ಸದ್ವಿನಿಯೋಗವಾಗುವ ಹಾಗೆ ನೋಡಿಕೊಳ್ಳಲಾಗುತ್ತಿದೆ. ನರೇಂದ್ರ ಮೋದಿ ಅವರ ಸೇವೆಯನ್ನು ಎಲ್ಲೆಡೆ ಸ್ಮರಿಸಲಾಗುತ್ತಿದೆ. ಪ್ರಜಾಪ್ರಭುತ್ವದಲ್ಲಿ ಟೀಕೆ ಟಿಪ್ಪಣೆ ಮಾಡಬೇಕು ಎಂಬ ನಿಯಮವಿದೆ. ಆದರೆ ಅದು ಸತ್ಯವಾಗಿರಬೇಕು. ಆದರೆ, ವಿರೋಧ ಪಕ್ಷಗಳು ಸತ್ಯವನ್ನು ಸುಳ್ಳಾಗಿಸಿ ಟೀಕೆ ಮಾಡುತ್ತಿದ್ದಾರೆ. ವ್ಯಾಕ್ಸಿನ್ ಸರಿ ಇಲ್ಲ ಎಂದವರೇ ಕದ್ದು ಮುಚ್ಚಿ ವ್ಯಾಕ್ಸಿನ್ ಪಡೆದಿದ್ದಾರೆ ಎಂದು ಟೀಕಿಸಿದರು.
ಇನ್ನು ಜಿಲ್ಲೆಯ ಹನ್ನೆರಡು ತಾಲೂಕುಗಳಿಂದ ಮಹಿಳೆಯರನ್ನ ಒಂದುಗೂಡಿಸಿ ಈ ಸಮಾವೇಶ ಮಾಡಲಾಗಿತ್ತು. ಜಿಲ್ಲೆಯಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಮಹಿಳಾ ಮತದಾರರೇ ಹೆಚ್ಚಿನ ಈ ನಿಟ್ಟಿನಲ್ಲಿ ಮಹಿಳೆಯರನ್ನ ಪಕ್ಷದತ್ತ ಸೆಳೆದರೆ ಸುಲಭ ಗೆಲುವು ಸಾಧಿಸಬಹುದು ಎನ್ನುವ ನಿಟ್ಟಿನಲ್ಲಿ ಸಮಾವೇಶ ಆಯೋಜನೆ ಮಾಡಲಾಗಿತ್ತು. ಇನ್ನು ವಿಶೇಷ ಅಂದರೆ ಈ ಸಮಾವೇಶದಲ್ಲಿ ಹೆಚ್ಚಾಗಿ ಮುಸಲ್ಮಾನ ಮಹಿಳೆಯರೂ ಪಾಲ್ಗೊಂಡಿದ್ದರು. ಸಮಾವೇಶದಲ್ಲಿ ಮಾತನಾಡಿದ ಕಾರವಾರ ಅಂಕೋಲಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ, ಹಿಂದೆ ಮುಸಲ್ಮಾನರು ಎಂದರೆ ಕಾಂಗ್ರೆಸ್ ಮತ ಬ್ಯಾಂಕ್ ಎಂದು ಹೇಳಲಾಗುತ್ತಿತ್ತು. ಈಗ ಕಾಲ ಬದಲಾಗಿದೆ. ಬಿಜೆಪಿಯತ್ತವೂ ಮಹಿಳೆಯರು ಆಗಮಿಸುತ್ತಿರುವುದಕ್ಕೆ ಮಹಿಳಾ ಸಮಾವೇಶವೇ ಸಾಕ್ಷಿಯಾಗಿದೆ ಎಂದರು.
ಆಸೆ ಆಮಿಷಗಳಿಗೆ ಬಲಿಯಾಗದೆ ಬಿಜೆಪಿಯನ್ನು ಬೆಂಬಲಿಸಬೇಕು: ಬಿಜೆಪಿ ತತ್ವ ಸಿದ್ದಾಂತಗಳನ್ನು ಮನೆ ಮನೆಗೆ ತಲುಪಿಸುವಲ್ಲಿ ಮಹಿಳಾ ಕಾರ್ಯಕರ್ತರು ಶ್ರಮವಹಿಸಬೇಕು. ಮೋದಿಜಿ ಕೊಟ್ಟಿರುವ ಯೋಜನೆಗಳನ್ನು ಜನರಿಗೆ ತಿಳಿಸಿ ಅದರ ಪ್ರಯೋಜನ ಪಡೆಯುವಂತೆ ಮಾಡಬೇಕು. ನನಗೆ ಶಾಸಕಿ ಆಗುವಾಗ, ಆದಮೇಲೂ ಹಲವಾರು ತೊಂದರೆ ನೀಡಿದ್ದಾರೆ. ಅದೆಲ್ಲವನ್ನು ಎದುರಿಸಲು ಮತದಾರರು ಶಕ್ತಿ ಕೊಟ್ಟಿದ್ದಾರೆ. ಟಿಂಗಲ್ ಮಾಡುವುದನ್ನು ಈ ಕಿವಿಯಲ್ಲಿ ಕೇಳಿ ಈ ಕಿವಿಯಲ್ಲಿ ಬಿಡಬೇಕು. ಯಾವುದೇ ಹೇಳಿಕೆಗಳಿಗೂ ಕಿವಿಗೊಡದೇ ಆಸೆ ಆಮಿಷಗಳಿಗೆ ಬಲಿಯಾಗದೇ ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಹೇಳಿದರು.
ಇನ್ನೊಂದೆಡೆ ಜಿಲ್ಲೆಯಲ್ಲಿ ಬಿಜೆಪಿ ಮಹಿಳಾ ಸಮಾವೇಶದ ನಂತರ ಮೂರು ದಿನಗಳ ಕಾಲ ವಿಜಯ ಸಂಕಲ್ಪ ಯಾತ್ರೆಯನ್ನ ಸಹ ಮಾಡುವುದಕ್ಕೆ ಮುಂದಾಗಿದೆ. ಒಟ್ಟಿನಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆ ಅಲರ್ಟ್ ಆಗಿರುವ ಬಿಜೆಪಿ ನಾಯಕರು ಮಹಿಳಾ ಸಮಾವೇಶ ಮಾಡಲು ಹೊರಟಿದ್ದು, ಇದು ಮತದಾರರ ಮೇಲೆ ಎಷ್ಟರ ಮಟ್ಟಿಗೆ ಪರಿಣಾಮ ಬೀಳಲಿದೆ ಎನ್ನುವುದನ್ನ ಕಾದು ನೋಡಬೇಕಾಗಿದೆ.
ಇದನ್ನೂ ಓದಿ :ಡಿಕೆಶಿ ಹಾಗೂ ಸಿದ್ದರಾಮಯ್ಯ ಕೊಲ್ಲಲು ಜಾಗ ಗುರುತಿಸಿ, ನಾನು ಕರೆ ತರುತ್ತೇನೆ: ರಣದೀಪ್ ಸಿಂಗ್ ಸುರ್ಜೆವಾಲಾ ಆಕ್ರೋಶ