ಉತ್ತರ ಕನ್ನಡ: ಶಿರಸಿ ನಗರದಲ್ಲಿ ಹಲವಾರು ಸಮಸ್ಯೆಗಳಿದ್ದು, ಕೂಡಲೇ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವಂತೆ ಉತ್ತರ ಕನ್ನಡ ಜಿಲ್ಲಾಧಿಕಾರಿ ಡಾ. ಹರೀಶ್ ಕುಮಾರ್ ಅವರಿಗೆ ಶಿರಸಿಯ ನಗರಸಭೆಯ ಬಿಜೆಪಿ ಸದಸ್ಯರು ಮನವಿ ಸಲ್ಲಿಸಿದರು.
ಶಿರಸಿ ಸಹಾಯಕ ಆಯುಕ್ತರ ಕಚೇರಿಯಲ್ಲಿ ಜಿಲ್ಲಾಧಿಕಾರಿ ಭೇಟಿ ಮಾಡಿ, ಕಳೆದ ಒಂದೆರಡು ವರ್ಷಗಳಿಂದ ನಗರದಲ್ಲಿ ಪೌರಾಯುಕ್ತರು, ಇಂಜಿನಿಯರ್ ಸೇರಿದಂತೆ ಕೆಲ ಅಧಿಕಾರಿಗಳ ಕೊರತೆ ಉಂಟಾಗಿದೆ. ಇದರಿಂದಾಗಿ ಕೆಲ ತುರ್ತು ಕೆಲಸಗಳು ಬಾಕಿ ಉಳಿಯುತ್ತಿದ್ದು, ಹೊಸ ಅಧಿಕಾರಿಗಳನ್ನು ನೇಮಕಗೊಳಿಸಿ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವಂತೆ ಮನವಿ ಮಾಡಿದರು.
ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ ಬಿಜೆಪಿಗರು ಶಿರಸಿಯಲ್ಲಿ ಫಾರ್ಮ ನಂ. 3 ನೀಡುವಲ್ಲಿ ವಿಳಂಬವಾಗುತ್ತಿದ್ದು, ಕಟ್ಟಡ ಕಾಮಗಾರಿ, ಖಾತಾ ಬದಲಾವಣೆಗಳ ಸಮಸ್ಯೆಯಾಗುತ್ತಿದೆ. ನಗರದಲ್ಲಿ ಬೀದಿ ನಾಯಿಗಳು ಹಾಗೂ ಜಾನುವಾರುಗಳು ಹೆಚ್ಚಾಗುತ್ತಿದ್ದು, ರಸ್ತೆ ಅಕ್ಕಪಕ್ಕದಲ್ಲಿ ಗಿಡ ಗಂಟಿಗಳು ಬೆಳೆದು ಓಡಾಡಲು ಭಯ ಪಡುವಂತಾಗಿದೆ. ಈ ಎಲ್ಲ ಸಮಸ್ಯೆಗಳ ಬಗ್ಗೆ ತುರ್ತು ಕ್ರಮ ಕೈಗೊಳ್ಳಬೇಕೆಂದು ವಿನಂತಿಸಿಕೊಂಡರು.
ಇನ್ನು ಮನವಿ ಆಲಿಸಿದ ಜಿಲ್ಲಾಧಿಕಾರಿಗಳು, ನಗರಸಭೆಯ ಎಲ್ಲ ಸದಸ್ಯರೊಂದಿಗೆ ಅನೌಪಚಾರಿಕ ಸಭೆ ನಡೆಸಿ ಸಮಸ್ಯೆಗಳ ಕುರಿತು ಚರ್ಚಿಸಿದರು. ಹಾಗೂ ನಗರಸಭೆ ವ್ಯಾಪ್ತಿಯಲ್ಲಿ ಬರುವ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.