ಪ್ರಮೋದ್ ಮಧ್ವರಾಜ್ ತಿರುಗೇಟು.. ಕಾರವಾರ:ಲೂಟಿ ಮಾಡಿ ಸಾಮ್ರಾಜ್ಯ ಕಟ್ಟುವ ಬದಲಿಗೆ ಪ್ರಾಮಾಣಿಕವಾಗಿ ಮೀನಿಗೆ ಗಾಳ ಹಾಕಿಕೊಂಡು ಇರುವುದು ಉತ್ತಮ ವೃತ್ತಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿಕೆಗೆ ಬಿಜೆಪಿ ಮುಖಂಡ ಪ್ರಮೋದ್ ಮಧ್ವರಾಜ್ ತಿರುಗೇಟು ನೀಡಿದ್ದಾರೆ.
ಪ್ರಮೋದ್ ಮಧ್ವರಾಜ್ ಅಧಿಕಾರದ ಆಸೆಯಲ್ಲಿ ಬಿಜೆಪಿಗೆ ತೆರಳಿ ಇದೀಗ ಅಧಿಕಾರ ಸಿಗದೆ ಮೀನಿಗೆ ಗಾಳ ಹಾಕುತ್ತಿದ್ದಾರೆ ಎಂದು ಉಡುಪಿಯಲ್ಲಿ ಇತ್ತೀಚೆಗೆ ಡಿಕೆಶಿ ಟೀಕಿಸಿದ್ದರು. ಇದಕ್ಕೆ ತಿರುಗೇಟು ನೀಡಿರುವ ಪ್ರಮೋದ್ "ಗಾಳ ಹಾಕಿ ಮೀನು ಹಿಡಿಯುವುದು ಒಂದು ಕಾಯಕ. ಮೀನುಗಾರರು ಸಾವಿರಾರು ವರ್ಷಗಳಿಂದ ಈ ವೃತ್ತಿ ಮಾಡಿಕೊಂಡು ಬಂದಿದ್ದಾರೆ. ಆ ಮೂಲಕವೇ ಪ್ರಾಮಾಣಿಕವಾಗಿ ಜೀವನ ಮಾಡುತ್ತಿದ್ದಾರೆ. ಆದರೆ ಡಿಕೆಶಿ ಎಲ್ಲಿಂದ ಎಲ್ಲಿಗೆ ಬಂದಿದ್ದಾರೆ ಎನ್ನುವುದನ್ನು ನೋಡಬೇಕಿದೆ ಎಂದು ಹೇಳಿದ್ದಾರೆ.
ಮೀನಿಗೆ ಗಾಳ ಹಾಕುವುದೇ ಲೇಸು: "ಡಿ.ಕೆ.ಶಿವಕುಮಾರ 1989ರಲ್ಲಿ ಮೊದಲ ಬಾರಿಗೆ ಶಾಸಕರಿದ್ದಾಗ ನನ್ನ ಸ್ನೇಹಿತರಾಗಿದ್ದರು. ನಮ್ಮ ತಾಯಿ ಸಚಿವೆಯಾಗಿದ್ದ ವೇಳೆ ನಮ್ಮ ಮನೆಗೆ ಡಿಕೆಶಿ ಬರುತ್ತಿದ್ದರು. ಆಗ ಅವರ ಆರ್ಥಿಕ ಪರಿಸ್ಥಿತಿ ಹೇಗಿತ್ತು, ಇಂದು ಹೇಗಿದೆ? ಎನ್ನುವುದನ್ನು ಗಮನಿಸಬೇಕು. ಪ್ರಾಯಶಃ ಲೂಟಿ ಮಾಡಿ ದುಡ್ಡು ಮಾಡಿ ಸಾಮ್ರಾಜ್ಯ ಕಟ್ಟುವ ಬದಲಿಗೆ ಪ್ರಾಮಾಣಿಕವಾಗಿ ಮೀನಿಗೆ ಗಾಳ ಹಾಕಿ ಹಿಡಿದು ಜೀವನ ನಡೆಸುವುದೇ ಉತ್ತಮವಾದ ವೃತ್ತಿ" ಎಂದಿದ್ದಾರೆ.
21 ಲಕ್ಷ ಪರಿಹಾರ:ಸುವರ್ಣ ತ್ರಿಭುಜ ಅವಘಡದ ಕುರಿತು ಪ್ರತಿಕ್ರಿಯಿಸಿದ ಅವರು "ಸುವರ್ಣ ತ್ರಿಭುಜ ಬೋಟ್ ಅವಘಡದಲ್ಲಿ ಏಳು ಮಂದಿ ಮೀನುಗಾರರು ಮೃತಪಟ್ಟಿದ್ದರು. ನಾನು ಮೀನುಗಾರಿಕಾ ಇಲಾಖೆಯ ಸಚಿವನಾಗುವ ಮುನ್ನ ಮೀನುಗಾರರು ಹೀಗೆ ಅವಘಡದಲ್ಲಿ ಮೃತಪಟ್ಟರೆ ಪರಿಹಾರ 2 ಲಕ್ಷ ರೂ. ಇತ್ತು. ಅದನ್ನು ನಾನು ಸಚಿವನಾದ ಬಳಿಕ 6 ಲಕ್ಷಕ್ಕೆ ಏರಿಸಿದ್ದೆ. ಸುವರ್ಣ ತ್ರಿಭುಜ ಅವಘಡದ ಸಂದರ್ಭದಲ್ಲಿ ಹೆಚ್.ಡಿ ಕುಮಾರಸ್ವಾಮಿಯವರ ನೇತೃತ್ವದಲ್ಲಿ ಸಮ್ಮಿಶ್ರ ಸರ್ಕಾರ ಇತ್ತು. ನಾನು ಪ್ರಯತ್ನ ಪಟ್ಟು ತಲಾ 11 ಲಕ್ಷ ಕೊಡಿಸಿದ್ದೆ. ಅದಾದ ಬಳಿಕ ಬಿಜೆಪಿ ಸರ್ಕಾರ ಬಂದ ನಂತರ ಮತ್ತೆ ತಲಾ 10 ಲಕ್ಷ ನೀಡಲಾಗಿದೆ. ಬೋಟ್ ಹುಡುಕಲು ನೌಕಾಪಡೆಯಿಂದ ಕಾರ್ಯಾಚರಣೆ ನಡೆಸಿ, ಬೋಟ್ ಮಾಲೀಕರಿಗೆ ಇನ್ಶೂರೆನ್ಸ್ ಹಣವೂ ಬರುವಂತೆ ಮಾಡಿದ್ದೇವೆ. ಮೃತ ಕುಟುಂಬಸ್ಥರಿಗೆ ತಲಾ 21 ಲಕ್ಷ ಪರಿಹಾರ ಕೊಡಿಸಲಾಗಿದೆ" ಎಂದರು.
ಅಂದು ಘಟನೆ ನಡೆದ ಸಂದರ್ಭದಲ್ಲಿ ನಾನು ಕೂಡ ಈ ಘಟನೆಯ ತನಿಖೆಗೆ ಒತ್ತಾಯಿಸಿದ್ದೆ. ಆದರೆ ತದನಂತರದಲ್ಲಿ ಮೃತ ಮೀನುಗಾರರ ಕುಟುಂಬಸ್ಥರು ಹಾಗೂ ಮೀನುಗಾರರು ಈ ಬಗ್ಗೆ ಹೆಚ್ಚು ಆಸಕ್ತಿ ತೋರಿಲ್ಲ. ಹೀಗಾಗಿ ಘಟನೆ ನಡೆದು ವರ್ಷಗಳೇ ಆದರೂ ಪರಿಹಾರ ಕೊಡುವ ಕೆಲಸವಾಗಿದೆ. ಆದರೆ ಘಟನೆಗೆ ಕಾರಣ ಇನ್ನೂ ನಿಗೂಢವಾಗಿದೆ. ಬೋಟ್ ಗುರುತಿಸಲಾಗಿದೆ. ಘಟನೆಯ ಹಿನ್ನೆಲೆ ತಿಳಿದು ಬಂದಿಲ್ಲ. ಪ್ರಾಯಶಃ ಯಾರು ಕೂಡ ಹತ್ಯೆ ನಡೆಸಿರುವ ಘಟನೆ ಇದಲ್ಲ ಎಂದರು.
ನೌಕಾಪಡೆಯವರು ಆಗಾಗ ಮೀನುಗಾರರ ಮೇಲೆ ಹಲ್ಲೆ ನಡೆಸುತ್ತಿದ್ದಾರೆಂಬ ಪತ್ರಕರ್ತರ ಪ್ರಶ್ನೆಗೆ "ನಮಗೆ ದೇಶದ ಭದ್ರತೆಗೆ ನೌಕಾನೆಲೆಯಷ್ಟೇ ಮೀನುಗಾರರ ಮಹತ್ವ ಕೂಡ ಅಷ್ಟೇ ಮುಖ್ಯ. ಎರಡನ್ನೂ ಸಮತೋಲನದಲ್ಲಿ ಕಾಣಬೇಕಿದೆ. ಹೀಗಾಗಿ ಈ ಬಗ್ಗೆ ಒಮ್ಮೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಿ ಮಾತುಕತೆ ಮಾಡುತ್ತೇವೆ" ಎಂದರು.
ಇದನ್ನೂ ಓದಿ:ಪ್ರಮೋದ್ ಮಧ್ವರಾಜ್ ಕಾಂಗ್ರೆಸ್‌ಗೆ ರಾಜೀನಾಮೆ : ಒಳ್ಳೆಯದಾಗಲಿ ಎಂದ ಕೆಪಿಸಿಸಿ ಅಧ್ಯಕ್ಷ ಡಿಕೆಶಿ