ಶಿರಸಿ: ಪರೇಶ್ ಮೇಸ್ತ ಪ್ರಕರಣದ ನಂತರ ಬಿಜೆಪಿ ಹೆಣದ ಮೇಲೆ ರಾಜಕಾರಣ ಮಾಡುತ್ತದೆ ಎಂದು ಜನರಿಗೆ ಅರ್ಥವಾಗಿದೆ ಎಂದು ವಿರೋಧ ಪಕ್ಷದ ನಾಯಕ ಬಿ ಕೆ ಹರಿಪ್ರಸಾದ್ ಹೇಳಿದ್ದಾರೆ. ಶಿರಸಿಯಲ್ಲಿ ನಡೆಯುತ್ತಿರುವ ಕರಾವಳಿ ಪ್ರಜಾಧ್ವನಿ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಎಲ್ಲಿ ಚುನಾವಣೆ ಎದುರಿಸಲಿಕ್ಕೆ ಆಗೋದಿಲ್ವೋ ಅಲ್ಲಿ ಕೋಮುಗಲಭೆ ಎಬ್ಬಿಸಿ, ಭಾವನಾತ್ಮಕ ಮಾತುಗಳನ್ನು ಆಡ್ತಾ ಇದ್ದಾರೆ. ಬಿಜೆಪಿ ಪಕ್ಷದ ಈ ಗಿಮಿಕ್ ಅನ್ನು ಜನ ಅರ್ಥ ಮಾಡ್ಕೊಂಡಿದ್ದಾರೆ. ಆದ್ದರಿಂದ ಈ ಸಲ ಸರಿಯಾಗಿ ಬುದ್ಧಿ ಕಲಿಸುತ್ತಾರೆ ಎಂದರು.
ಬಿಜೆಪಿಯ ದಬ್ಬಾಳಿಕೆ ದೌರ್ಜನ್ಯ ಹೋಗಲಾಡಿಸೋಕೆ ಪ್ರಜಾಧ್ವನಿ ಯಾತ್ರೆ ಹಮ್ಮಿಕೊಂಡಿದ್ದೇವೆ. ಭ್ರಷ್ಟಾಚಾರ ತಾಂಡವವಾಡುತ್ತಿದೆ. ಬೆಲೆ ಏರಿಕೆ ಆಕಾಶಕ್ಕೆ ಮುಟ್ಟಿದೆ. ಜನರ ನಿರೀಕ್ಷೆಯನ್ನು ಅರ್ಥ ಮಾಡಿಕೊಂಡು ಮುಂದೆ ಏನು ಮಾಡ್ಬೇಕು ಅನ್ನೋದನ್ನು ತಿಳಿಯೋಕೆ ಈ ಯಾತ್ರೆ ಮಾಡುತ್ತಿದ್ದೇವೆ ಎಂದು ಹೇಳಿದರು.
ಎಲ್ಲ ಟೆಂಡರ್ಗಳಲ್ಲೂ 40 ಶೇ ಕಮಿಷನ್ ಜಗಜ್ಜಾಹೀರಾಗಿದೆ. ಈಗಾಗಲೇ ಪ್ರಧಾನಿ ನೇಂದ್ರ ಮೋದಿ ಅವರಿಗೆ ಇದರ ಬಗ್ಗೆ ಪತ್ರ ಬರೆದರೂ ಕೂಡ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಇದರ ಬಗ್ಗೆ ಜನರಿಗೆ ಜಾಗೃತಿ ಮೂಡಿಸಬೇಕಿದೆ ಎಂದ ಹರಿಪ್ರಸಾದ್, ಸಿದ್ದರಾಮಯ್ಯ ಅವರು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ. ಬಾದಾಮಿಯಲ್ಲಿ ನಾನು ಸ್ಪರ್ಧೆ ಮಾಡಲ್ಲ. ಕೋಲಾರದಲ್ಲಿ ನಾನು ಸ್ಪರ್ಧೆ ಮಾಡುತ್ತೇನೆ. ಅದಕ್ಕೆ ಹೈಕಮಾಂಡ್ ಒಪ್ಪಿಗೆ ಬೇಕು ಅಂತ ಕೇಳಿದಾರೆ ಎಂದರು.
ನಳಿನ್ ಕುಮಾರ್ ಕಟೀಲ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇವರ ಪಕ್ಷ ಯಾವುದಂತೆ? ಅವರ ಪೂರ್ವಜರು ಗಾಂಧಿಯನ್ನೇ ಕೊಂದ ಪಕ್ಷ. ದೇಶದಲ್ಲಿ ಮೊಟ್ಟಮೊದಲ ಭಯೋತ್ಪಾದಕನನ್ನು ಹುಟ್ಟುಹಾಕಿದ್ದೇ ಬಿಜೆಪಿ ಪಕ್ಷ, ಆರ್ಎಸ್ಎಸ್ ಹಾಗೂ ಹಿಂದೂ ಮಹಾಸಭಾ. ಇವರ ಸರ್ಟಿಫಿಕೇಟ್ ನಮಗೆ ಬೇಕಾಗಿಲ್ಲ. ಬ್ರಿಟಿಷರ ಏಜೆಂಟರು ನಮ್ಮನ್ನು ಭಯೋತ್ಪಾದಕರು ಅನ್ನಲೇಬೇಕಲ್ಲ ಎಂದು ತಿರುಗೇಟು ನೀಡಿದರು.
ಇನ್ನು ಬ್ರಾಹ್ಮಣ ಮುಖ್ಯಮಂತ್ರಿ ವಿಚಾರವಾಗಿ ಪ್ರಶ್ನೆಗೆ ಉತ್ತರಿಸಿದ ಅವರು, ಸಂವಿಧಾನ, ಪ್ರಜಾಪ್ರಭುತ್ವದಲ್ಲಿ ಯಾರು ಬೇಕಾದರೂ ಮುಖ್ಯಮಂತ್ರಿ ಆಗಬಹುದು. ಜನ ಯಾರಿಗೆ ಆಶೀರ್ವಾದ ಮಾಡ್ತಾರೋ ಅವರು ಮುಖ್ಯಮಂತ್ರಿ ಆಗುತ್ತಾರೆ. ಆದರೆ ಗೋಡ್ಸೆ ಸಂತತಿಯನ್ನು ಸೋಲಿಸಬೇಕಿದೆ. ಅವರೇನು ರಾಮನನ್ನು ಗುತ್ತಿಗೆ ತೆಗೆದುಕೊಂಡಿದ್ದಾರಾ? ಮಹಾತ್ಮಾ ಗಾಂಧಿಯವರ ರಾಮರಾಜ್ಯಕ್ಕೂ ಇವರ ರಾಮರಾಜ್ಯಕ್ಕೂ ವ್ಯತ್ಯಾಸವಿದೆ. ಇವರ ರಾಮರಾಜ್ಯ ಭಯೋತ್ಪಾದಕರ ರಾಜ್ಯ, ಮಾತೆತ್ತಿದ್ರೆ ಅಂಬೇಡ್ಕರ್ ಅಂತಾರೆ, ಮಾಡೋ ಕೆಲ್ಸ ಸಾವರ್ಕರ್ ಅವರದ್ದು. ಆದ್ದರಿಂದ ಅಂಬೇಡ್ಕರ್ ವರ್ಸಸ್ ಸಾವರ್ಕರ್ ಸ್ಪರ್ಧೆ ಇದೆ ಎಂದರು.
ಟಿಪ್ಪು ಸುಲ್ತಾನ್ ಒಬ್ಬ ಸ್ವಾತಂತ್ರ್ಯ ಹೋರಾಟಗಾರ, ಇವರ ತರ ರಣಹೇಡಿಯಲ್ಲ. ಬ್ರಿಟಿಷರ ಗುಲಾಮಗಿರಿ ಮಾಡುವಂತಹ ಇವರ ಪೂರ್ವಜರ ಸಂತತಿ ಟಿಪ್ಪು ಸುಲ್ತಾನ್ ಅವರದ್ದಲ್ಲ ಎಂದ ಅವರು, ಮೋದಿ ಈ ಹಿಂದೆ ಉತ್ತರ ಕರ್ನಾಟಕದಲ್ಲಿ ಮಳೆ ಹಾನಿ ಆದಾಗಲೂ ಬರ್ಲಿಲ್ಲ. ಆಗ ಇಲ್ಲದ ಕಾಳಜಿ ಎಲೆಕ್ಷನ್ ಸಮಯದಲ್ಲಿ ಬಂದಿದೆ ಎಂದು ಹರಿಪ್ರಸಾದ್ ಟೀಕಿಸಿದರು.
ಇದನ್ನೂ ಓದಿ:ಭದ್ರಾವತಿ ವಿಎಸ್ಎಲ್ ಕಾರ್ಖಾನೆ ಉಳಿಸಲು ಬಿಎಸ್ವೈ ಒತ್ತಾಯ: ಕಾರ್ಖಾನೆ ಸ್ಥಗಿತಗೊಳಿಸದಂತೆ ಕ್ರಮ ಎಂದ ಸಚಿವ ಜೆ.ಸಿ.ಮಾಧುಸ್ವಾಮಿ