ಕಾರವಾರ: ಐದು ಬಾರಿ ಸಂಸದರಾದರೂ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಸ್ಪಂದಿಸದ ಅನಂತಕುಮಾರ್ ಹೆಗಡೆಗೆ ಈ ಬಾರಿ ಕ್ಷೇತ್ರದ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಮೈತ್ರಿ ಪಕ್ಷದ ಅಭ್ಯರ್ಥಿ ಆನಂದ್ ಅಸ್ನೋಟಿಕರ್ ಹೇಳಿದರು.
ಏ. 4ರಂದು ನಡೆಯಲಿರುವ ಸಮಾವೇಶದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಭಾಗಿಯಾಗುವ ಹಿನ್ನೆಲೆ ಇಂದು ಸಲ್ಲಿಸಬೇಕಾಗಿದ್ದ ನಾಮಪತ್ರ ದಿನಾಂಕವನ್ನು ಮುಂದೂಡಿ ಪುರೋಹಿತರ ಸಲಹೆಯಂತೆ ನಾಮಪತ್ರಕ್ಕೆ ಸಹಿ ಹಾಕಿ ಮನೆಯಲ್ಲಿಯೇ ಇರಿಸಿದರು. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿ, ಅನಂತಕುಮಾರ್ ಹೆಗಡೆ ಯಾರಿಗೂ ಹೊಲಿಕೆ ಮಾಡಲಾಗದ ಸಂಸದ. 22 ವರ್ಷಗಳ ಕಾಲ ಸಂಸದರಾದರೂ ಒಂದು ಬಾರಿಯೂ ಕೆಡಿಪಿ ಸಭೆಗೆ ಹಾಜರಾಗಿಲ್ಲ. ಕೈಗಾ ಸೀಬರ್ಡ್ನಂತಹ ಬೃಹತ್ ಯೋಜನೆಗಳಿದ್ದರೂ ಜನರಿಗೆ ಉಪಯೋಗವಾಗುವಂತೆ ಯಾವುದೇ ಕೆಲಸ ಮಾಡಿಲ್ಲ. ಇಂಥವರಿಗೆ ಕ್ಷೇತ್ರದ ಮತದಾರರು ತಕ್ಕ ಪಾಠ ಕಲಿಸಲು ಮುಂದಾಗಿದ್ದಾರೆ ಎಂದು ಹೇಳಿದರು.