ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬಿಸ್ಲಕೊಪ್ಪದಿಂದ ಹಾವೇರಿ ಜಿಲ್ಲೆಯವರೆಗೆ ಹೆದ್ದಾರಿ ಕಾಮಗಾರಿ ಅರೆಬರೆಯಾಗಿದ್ದು, ವಾಹನ ಸವಾರರು ತೀವ್ರ ತೊಂದರೆ ಪಡುವಂತಾಗಿದೆ. ಇದರಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಜನರು ಹಿಡಿಶಾಪ ಹಾಕುತ್ತಿದ್ದಾರೆ.
ಸಾಗರಮಾಲಾ ಯೋಜನೆ ಅಡಿ ಎರಡನೆ ಹಂತದಲ್ಲಿ ತಾಲ್ಲೂಕಿನ ಬಿಸಲಕೊಪ್ಪದಿಂದ ಹಾವೇರಿ ಜಿಲ್ಲೆಯ ನಾಲ್ಕರ ಕ್ರಾಸ್‍ವರೆಗಿನ ಹೆದ್ದಾರಿ (766–ಇ) ಕಾಮಗಾರಿಗೆ ಚಾಲನೆ ದೊರೆತಿದೆ. ಹೆದ್ದಾರಿಗಾಗಿ ಮೂರು ಕಡೆಗಳಲ್ಲಿ ಕೈಗೊಂಡಿರುವ ಕಲ್ವರ್ಟ್ ಚರಂಡಿ (ಸಿ.ಡಿ.) ಕಾಮಗಾರಿಯಿಂದ ರಸ್ತೆ ಕೆಸರುಮಯವಾಗಿ ಪರಿವರ್ತನೆಗೊಂಡಿದೆ. ಮಳಲಗಾಂವ, ದನಗನಹಳ್ಳಿ, ದಾಸನಕೊಪ್ಪ ಭಾಗದಲ್ಲಿ ಪ್ರಾರಂಭಿಕ ಹಂತವಾಗಿ ಅಡ್ಡ ಸಿಡಿ ನಿರ್ಮಿಸುವ ಕಾರ್ಯವನ್ನು ಕಾಮಗಾರಿ ಗುತ್ತಿಗೆ ಪಡೆದಿರುವ ಅಮ್ಮಾಪುರ ಇನ್‍ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿ. ಸಂಸ್ಥೆ ಕೆಲವು ದಿನಗಳ ಹಿಂದೆ ಕೈಗೆತ್ತಿಕೊಂಡಿದೆ.
ಪ್ರತಿನಿತ್ಯ ನೂರಾರು ವಾಹನಗಳು ಸಂಚರಿಸುವ ಮುಖ್ಯ ರಸ್ತೆ ಇದಾಗಿದ್ದು, ಶಿರಸಿಯಿಂದ ಹಾವೇರಿ, ದಾವಣಗೆರೆ, ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಿಗೆ ಸಂಪರ್ಕಿಸಲು ಅನುಕೂಲವಾಗಿದೆ. ಹೀಗಾಗಿ ಇಲ್ಲಿ ಓಡಾಟ ನಡೆಸುವವರು ಹೆಚ್ಚಿದ್ದಾರೆ. ಆದರೇ ಮಳೆಯಿಂದ ಹೆದ್ದಾರಿ ಕೆಸರುಮಯವಾಗಿರುವ ಕಾರಣ ಈಚೆಗೆ ಸಣ್ಣಪುಟ್ಟ ಅಪಘಾತಗಳೂ ಹೆಚ್ಚುತ್ತಿವೆ. ಕಳೆದ ೪೫ ವರ್ಷಗಳ ಆಗ್ರಹದಿಂದ ಈಗ ರಾಜ್ಯ ಹೆದ್ದಾರಿಯಿಂದ ರಾಷ್ಟ್ರೀಯ ಹೆದ್ದಾರಿಯಾಗಿ ಮಾರ್ಪಾಟಾಗಿದೆ.