ಕಾರವಾರ :ಭಾರತದಲ್ಲಿ ಇದುವರೆಗೆ ಪತ್ತೆಯಾದ ಬಂಗುಡೆ ಮೀನುಗಳಲ್ಲಿ ಅತಿ ದೊಡ್ಡದು ಹಾಗೂ ಉದ್ದವಿರುವ ಬಂಗುಡೆ ಮೀನೊಂದು ಕಾರವಾರದ ಅರಬ್ಬಿ ಸಮುದ್ರದಲ್ಲಿ ಮೀನುಗಾರರ ಬಲೆಗೆ ಬಿದ್ದಿದೆ. ಇದನ್ನು ನೋಡಲು ಜನರು ಮುಗಿಬಿದ್ದರು.
ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಆನಂದು ರಾಮಾ ಹರಿಕಂತ್ರ ಅವರಿಗೆ ಸೇರಿದ, ಎಂ.ಐ. ಇಂಜಿನ್ ಹೊಂದಿದ ಪಾತಿ ದೋಣಿಯ ಬೀಡು ಬಲೆಗೆ ಮೀನು ಬಿದ್ದಿದೆ. ಈ ಬಂಗುಡೆ 48 ಸೆಂ.ಮೀ ಉದ್ದವಿದ್ದು, ಸುಮಾರು 12 ಸೆಂ.ಮೀ ಅಗಲವಿದೆ. 1.2 ಕೆ.ಜಿ ತೂಕವಿದ್ದು, ಪಶ್ಚಿಮ ಕರಾವಳಿ ಭಾಗದಲ್ಲಿ ಸಿಕ್ಕಿರುವ ಬಂಗುಡೆ ಮೀನುಗಳಲ್ಲಿ ಇದು ಅತೀ ಹೆಚ್ಚು ತೂಕದ್ದು. ಈ ಹಿಂದೆ 36 ಸೆಂ.ಮೀ. ಗಂಡು ಬಂಗುಡೆ, 42 ಸೆಂ.ಮೀ. ಹೆಣ್ಣು ಬಂಗುಡೆ ಸಿಕ್ಕಿರುವುದು ದಾಖಲೆಯಾಗಿತ್ತು. ಸಾಮಾನ್ಯವಾಗಿ ದೊಡ್ಡ ಬಂಗುಡೆ ಮೀನುಗಳು 25ರಿಂದ 30 ಸೆಂ.ಮೀವರೆಗೆ ಮಾತ್ರ ಬೆಳೆಯುತ್ತದೆ. ಭಾರತದಲ್ಲಿ ದೊರೆತ ಬಂಗುಡೆ ಮೀನುಗಳಲ್ಲಿ ಅತ್ಯಂತ ದೊಡ್ಡದಾದ ಬಂಗುಡೆ ಮೀನೆಂಬ ದಾಖಲೆಗೆ ಇದು ಪಾತ್ರವಾಗಿದೆ.
ಈ ಬಂಗಡೆ ಮೀನನ್ನು ಮಾರಾಟ ಮಾಡದೇ ವಿದ್ಯಾರ್ಥಿಗಳ ಅಧ್ಯಯನಕ್ಕೆ ಬಳಸಲಾಗುತ್ತದೆ. ಹಾಗಾಗಿ ಮೀನನ್ನು ಜಿಲ್ಲಾ ವಿಜ್ಞಾನ ಕೇಂದ್ರಕ್ಕೆ ನೀಡಲು ಮೀನುಗಾರರು ನಿರ್ಧರಿಸಿದ್ದಾರೆ. ಈ ಮೀನನ್ನು ಕೋಲ್ಡ್ ಸ್ಟೋರೆಜ್‌ನಲ್ಲಿ ಇರಿಸಲಾಗಿತ್ತು. ಸೋಮವಾರ ಮರೈನ್ ಬಯೋಲಜಿ ವಿಭಾಗದ ಪ್ರಾಧ್ಯಾಪಕ ಶಿವಕುಮಾರ ಹರಗಿ ನೇತೃತ್ವದಲ್ಲಿ ವಿದ್ಯಾರ್ಥಿಗಳ ತಂಡ ಬೈತಖೋಲಕ್ಕೆ ಭೇಟಿ ನೀಡಿ ಮೀನನ್ನು ಪರಿಶೀಲಿಸಿ ಮಾಹಿತಿ ಪಡೆದುಕೊಂಡರು.