ಭಟ್ಕಳ: ಕೊರೊನಾ ಹಿನ್ನೆಲೆ ನಿಂತುಹೋಗಿದ್ದ ದ್ವಿತೀಯ ಪಿಯುಸಿಯ ಕೊನೆಯ ಪರೀಕ್ಷೆಯಾದ ಇಂಗ್ಲೀಷ್ ವಿಷಯದ ಪರೀಕ್ಷೆಯು ರಾಜ್ಯ ಸರಕಾರದ ಸುತ್ತೋಲೆಯಂತೆ ಜೂನ್ 18 ರಂದು ನಡೆಯಲಿದ್ದು, ತಾಲೂಕಿನಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಕೊರೊನಾ ಲಾಕ್ಡೌನ್ನಿಂದಾಗಿ ಮಾರ್ಚ್ ತಿಂಗಳಲ್ಲೇ ನಡೆಯಬೇಕಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಕೊನೆಯ ಪರೀಕ್ಷೆ ಸಾಕಷ್ಟು ಸಭೆ, ಚರ್ಚೆಗಳ ನಂತರ ಸದ್ಯ ಜೂನ್ 18 ಅಂದರೆ ನಾಳೆ ನಡೆಸುವಂತೆ ಸರ್ಕಾರ ಆದೇಶ ಹೊರಡಿಸಿದೆ.
ತಾಲೂಕಿನ ಒಟ್ಟು 4 ಪರೀಕ್ಷಾ ಕೇಂದ್ರಗಳಾದ ಶ್ರೀ ಗುರು ಸುಧೀಂದ್ರ ಪಿಯು ಕಾಲೇಜು, ಅಂಜುಮನ್ ಪಿಯು ಕಾಲೇಜು, ಶಿರಾಲಿ ಜನತಾ ವಿದ್ಯಾಲಯ ಪದವಿ ಪೂರ್ವ ಕಾಲೇಜು ಹಾಗೂ ಮುರುಡೇಶ್ವರದ ಆರ್ಎನ್ಎಸ್ ಕಾಲೇಜುಗಳಲ್ಲಿ ಕ್ರಮವಾಗಿ 426, 830, 175 ಹಾಗೂ 299 ಅಂದರೆ ಒಟ್ಟು 1731 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಸಜ್ಜಾಗಿದ್ದಾರೆ. ಈಗಾಗಲೇ ಆಯಾ ಪರೀಕ್ಷಾ ಕೇಂದ್ರದ ಮುಖ್ಯಸ್ಥರು, ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಎಲ್ಲಾ ಸಿದ್ದತೆಯನ್ನು ಮಾಡಿಕೊಂಡಿದ್ದು, ವಿದ್ಯಾರ್ಥಿಗಳು ನಿರ್ಭಯದಿಂದ ಬಂದು ತಮ್ಮ ಕೊನೆಯ ಪರೀಕ್ಷೆ ಬರೆಯಬಹುದು ಎಂದು ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಭಟ್ಕಳ ಗುರು ಸುಧೀಂದ್ರ ಪಿಯು ಕಾಲೇಜು ಪ್ರಾಂಶುಪಾಲ ವಿರೇಂದ್ರ ಶ್ಯಾನಭಾಗ, ಮಳೆಯ ಸಂದರ್ಭದಲ್ಲಿ ಎಲ್ಲಾ ವ್ಯವಸ್ಥೆ ಮಾಡುವುದು ದೊಡ್ಡ ಸವಾಲಾಗಿದೆ. ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಸರ್ಕಾರವೂ ಕಾನೂನು ಮಾಡಿದ್ದು, ಅದರಂತೆ ಎಲ್ಲರೂ ಪಾಲನೆ ಮಾಡಬೇಕು. ಪರೀಕ್ಷೆ ಬರೆಯುವ ಒತ್ತಡಕ್ಕೆ ವಿದ್ಯಾರ್ಥಿಗಳು ಒಳಗಾಗದೇ ನೆಮ್ಮದಿಯಾಗಿ ಪರೀಕ್ಷಾ ಕೇಂದ್ರಕ್ಕೆ ಬಂದು ಪರೀಕ್ಷೆ ಬರೆಯಿರಿ ಎಂದರು.