ಭಟ್ಕಳ: ತಾಲೂಕಿನ ಬೆಳಕೆ ಅರಣ್ಯ ವಲಯದಲ್ಲಿ ಮಂಗ ಹಾಗೂ ಕಾಡು ಬೆಕ್ಕಿನ ಮಾಂಸ ಶೇಖರಣೆ ವಿಚಾರವಾಗಿ ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ ಅರಣ್ಯ ಸಿಬ್ಬಂದಿ ಇಂದು 5 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದು ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದಾರೆ.
ಬಂಧಿತ ಐವರು ಆರೋಪಿಗಳಾದ ರಾಘವೇಂದ್ರ ರಾಮಣ್ಣ (32), ಮರಿಯಣ್ಣ ರಾಮಪ್ಪ ಭೋವಿವಡ್ಡರ (47), ವೆಂಕಟೇಶ ಮುನಿಯಪ್ಪ ಭೋವಿವಡ್ಡರ (47), ನಾಗೇಂದ್ರ ಪೆದ್ದಪ್ಪ ಭೋವಿವಡ್ಡರ (18) ಹಾಗೂ ಕೃಷ್ಣ ಚಿನ್ನಪ್ಪ ಭೋವಿವಡ್ಡರ (32) ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಹೊನ್ನೇಸರ, ಬೋವಿವಡ್ಡರ ಗಡಿಕಟ್ಟೆ ನಿವಾಸಿಗರು ಎಂದು ತಿಳಿದು ಬಂದಿದೆ.
ಅರಣ್ಯಾಧಿಕಾರಿಗಳಿಂದ ಬೇಟೆಗಾರರ ಬಂಧನ.. ಶುಕ್ರವಾರ ಬೆಳಕೆ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಸಾಗರ ಮೂಲದ ಬೇಟೆಗಾರರು ಮಂಗ ಹಾಗೂ ಕಾಡು ಬೆಕ್ಕಿನ ಮಾಂಸವನ್ನು ಶೇಖರಿಸಿಟ್ಟಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹೊನ್ನಾವರ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಭಟ್ಕಳ ಉಪ ವಿಭಾಗದ ಸಮ್ಮುಖದಲ್ಲಿ, ಭಟ್ಕಳ ವಲಯ ಅರಣ್ಯಾಧಿಕಾರಿ ಶ್ರೀಮತಿ ಸವಿತಾ ಆರ್, ದೇವಾಡಿಗ ಅವರ ತಂಡ ಕಾರ್ಯಾಚರಣೆಗಿಳಿದಿದ್ದರು. ಸತತ ಎರಡು ದಿನದ ಕಾರ್ಯಾಚರಣೆಯ ಬಳಿಕ ಆರೋಪಿಗಳನ್ನು ಬಂಧಿಸುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಉಪ ವಲಯ ಅರಣ್ಯಾಧಿಕಾರಿಗಳಾದ ಶ್ರೀಕಾಂತ, ಮಲ್ಲಿಕಾರ್ಜುನ ಅಂಗಡಿ, ಪ್ರಮೋದ್, ಮಂಜುನಾಥ ಅರಣ್ಯ ರಕ್ಷಕರಾದ ವೀರೇಶ, ಪ್ರಶಾಂತ ಇವರು ಕಾರ್ಯಾಚರಣೆ ತಂಡದಲ್ಲಿದ್ದರು.