ಭಟ್ಕಳ :ಪ್ಯಾಲೆಸ್ಟೀನ್‌ನಹಮಾಸ್ ಉಗ್ರರು ಇಸ್ರೇಲ್ ಮೇಲೆ ರಾಕೆಟ್ ಹಾಗೂ ಕ್ಷಿಪಣಿಗಳ ಮಳೆಗೈದ ಹಿನ್ನೆಲೆಯಲ್ಲಿ ಸಾಕಷ್ಟು ಮಂದಿ ಸಾವನ್ನಪ್ಪಿದ್ದು ಸದ್ಯ ಭಾರತೀಯರ ರಕ್ಷಣೆಗೆ ಭಾರತೀಯ ರಾಯಭಾರಿ ಕಚೇರಿ ಮುಂದಾಗಿದೆ. ಇಸ್ರೇಲ್‌ನಲ್ಲಿ ನೆಲೆಸಿ, ರಕ್ಷಣೆಯಾಗಿರುವ ಭಟ್ಕಳದ 40ಕ್ಕೂ ಅಧಿಕ ಜನರ ಹೆಸರುಗಳನ್ನು ಗುರುತಿಸಲಾಗಿದ್ದು, ಎಲ್ಲರೂ ತಮ್ಮ ಕುಟುಂಬಸ್ಥರೊಂದಿಗೆ ಸಂಪರ್ಕದಲ್ಲಿದ್ದಾರೆ.
ಭಟ್ಕಳದ 40ಕ್ಕೂ ಅಧಿಕ ಜನರ ರಕ್ಷಣೆ:ಉದ್ಯೋಗದ ನಿಮಿತ್ತ ಇಸ್ರೇಲ್‌ನಲ್ಲಿ ನೆಲೆಸಿರುವ ಭಟ್ಕಳದ 40ಕ್ಕೂ ಅಧಿಕ ಜನರು ಸದ್ಯ ಭಾರತೀಯ ರಾಯಭಾರಿ ಕಚೇರಿಯಿಂದ ಸಂಪರ್ಕಕ್ಕೆ ಸಿಕ್ಕಿದ್ದು, ಎಲ್ಲರೂ ಕುಟುಂಬದವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಹೀಗಾಗಿ ಮನೆ ಮಂದಿ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಆದರೆ, ಯುದ್ದದ ಪರಿಸ್ಥಿತಿ ಮುಂದೇನಾಗಲಿದೆ ಎಂಬ ಭಯ ಕುಟುಂಬಸ್ಥರಲ್ಲಿ ಮನೆಮಾಡಿದೆ.
ಮುಂಡಳ್ಳಿ ಭಾಗದ 12 ಮಂದಿ ಹಾಗೂ ಮುರುಡೇಶ್ವರ ಬಸ್ತಿ ಚರ್ಚ್ ಕ್ರಾಸ್ ಬಳಿ 29 ಮಂದಿ ಇಸ್ರೇಲ್‌ನಲ್ಲಿ ನೆಲೆಸಿರುವುದು ದೃಢಪಟ್ಟಿದೆ. ಮುರುಡೇಶ್ವರದ ಚರ್ಚ್ ಕ್ರಾಸ್ ಸಮೀಪದ ನಿವಾಸಿ ಇಸ್ರೇಲ್‌ನಲ್ಲಿ ನೆಲೆಸಿರುವ ಸುನೀಲ್ ಎಫ್. ಗೋಮ್ಸ ಮತ್ತು ಡಾಲ್ಪಿ ಗೋಮ್ಸ ನಿವಾಸಕ್ಕೆ ತೆರಳಿದ್ದಾರೆ. ಈ ವೇಳೆ ಇವರ ತಾಯಿ ಹೇಲಿನ್ ಗೋಮ್ಸ ಹಾಗೂ ಸಹೋದರಿ ಇಬ್ಬರೊಂದಿಗೆ ವಿಡಿಯೋ ಕರೆ ಮೂಲಕ ಸಂಪರ್ಕಿಸಿ ಸುರಕ್ಷತೆಯ ಬಗ್ಗೆ ವಿಚಾರಿಸಿದರು.
ಘಟನೆ ನಡೆದ ನಡೆದ ಸಮೀಪದಲ್ಲಿಯೇ ನಾವು ಕೆಲಸಕ್ಕಾಗಿ ನೆಲೆಸಿದ್ದ ಪ್ರದೇಶವಿದೆ. ಯಾವ ಸಂದರ್ಭದಲ್ಲಿ ಪರಿಸ್ಥಿತಿ ಏನಾಗಲಿದೆ ಎಂಬ ಭಯ ನಮ್ಮಲ್ಲಿದೆ. ಆದರೆ ಭಾರತೀಯ ರಾಯಭಾರಿ ಕಚೇರಿಯಿಂದ ಭಾರತೀಯರನ್ನು ಸಂಪರ್ಕಿಸುವ ಕಾರ್ಯಾರಂಭವಾಗಿದೆ ಎಂಬ ಮಾಹಿತಿಯ ಮೇಲೆ ನಾವಿಬ್ಬರೂ ಸಹ ಕಚೇರಿಯ ಸಿಬ್ಬಂದಿಯನ್ನು ಸಂಪರ್ಕಿಸಿ ನಮ್ಮ ಸುರಕ್ಷತೆಯ ಬಗ್ಗೆ ಮಾಹಿತಿ ಪಡೆದುಕೊಂಡೆವು. ಅನಾವಶ್ಯಕವಾಗಿ ಯಾರೂ ಸಹ ಓಡಾಟ ಮಾಡಬಾರದು ಎಂಬ ಕಠಿಣ ಆದೇಶವಿದ್ದು, ಅವಶ್ಯಕತೆಯಿದ್ದಲ್ಲಿ ಮಾತ್ರ ಓಡಾಡಲು ಅನುಮತಿ ನೀಡಿದ್ದಾರೆ.