ಭಟ್ಕಳ: ಅಕ್ರಮ ಚಿನ್ನ ಸಾಗಾಟ ಆರೋಪದ ಮೇರೆಗೆ ಭಟ್ಕಳದ ವ್ಯಕ್ತಿಯೋರ್ವನ ಮನೆ ಹಾಗೂ ಕಚೇರಿಯ ಮೇಲೆ ಪುಣೆಯ ಕಸ್ಟಮ್ಸ್ ಅಧಿಕಾರಿಗಳು ದಾಳಿ ನಡೆಸಿದ್ದು, ಹೆಚ್ಚಿನ ವಿಚಾರಣೆಗಾಗಿ ಆತನನ್ನು ವಶಕ್ಕೆ ಪಡೆದು ಮುಂಬೈಗೆ ಕರೆದುಕೊಂಡು ಹೋದ ಘಟನೆ ಶನಿವಾರ ರಾತ್ರಿ ನಡೆದಿದೆ.
ಪಟ್ಟಣದ ಸುಲ್ತಾನ ಸ್ಟ್ರೀಟ್‌ನ ನಿವಾಸಿ ಮಹ್ಮದ್ ಫರಾನ್‌ನನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈತನ ಮೇಲೆ ಅಕ್ರಮ ಚಿನ್ನ ಸಾಗಾಟ ಮತ್ತು ಮಾರಾಟದ ಆರೋಪವಿದೆ ಎಂದು ತಿಳಿದು ಬಂದಿದೆ.
ಅಕ್ರಮ ಚಿನ್ನ ಸಾಗಟ ಆರೋಪ: ಭಟ್ಕಳದ ವ್ಯಕ್ತಿ ಪುಣೆಯ ಕಸ್ಟಮ್ಸ್ ಅಧಿಕಾರಿಗಳ ವಶಕ್ಕೆ ಈತ ಭಟ್ಕಳದ ಒಂದು ಖಾಸಗಿ ಕಚೇರಿಯಲ್ಲಿ ವಿಮಾನ ಟಿಕೆಟ್‌ಗಳನ್ನು ಬುಕ್ ಮಾಡುತ್ತಿದ್ದ. ವಿದೇಶಕ್ಕೆ ಗೋವಾ ಅಥವಾ ಮಂಗಳೂರು ನಿಲ್ದಾಣದಿಂದ ಟಿಕೆಟ್ ಬುಕ್ ಮಾಡಿದರೆ ಈತ ಅಲ್ಲಿಂದ ತೆರಳದೆ ಮುಂಬೈನಿಂದ ವಿದೇಶಕ್ಕೆ ತೆರಳುತ್ತಿದ್ದ. ಅಲ್ಲಿಂದ ಅಕ್ರಮವಾಗಿ ತಂದ ಚಿನ್ನವನ್ನು ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಈತನಿಂದ ಚಿನ್ನ ಪಡೆದ ವ್ಯಕ್ತಿಯೋರ್ವ ಕೆಲವು ದಿನಗಳ ಹಿಂದೆ ಪುಣೆಯ ಕಸ್ಟಮ್ಸ್ ಅಧಿಕಾರಿಗಳ ಬಲೆಗೆ ಬಿದ್ದಿದ್ದ. ಆತನು ನೀಡಿದ ಮಾಹಿತಿ ಮೇರೆಗೆ ಪುಣೆಯ ಕಸ್ಟಮ್ಸ್ ಅಧಿಕಾರಿಗಳು ಭಟ್ಕಳದ ಆರೋಪಿಯ ಮನೆಯ ಮೇಲೆ ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಭಟ್ಕಳದ ಕಸ್ಟಮ್ಸ್ ಅಧಿಕಾರಿಗಳೊಂದಿಗೆ ಹಾಗೂ ಸ್ಥಳೀಯ ಪೊಲೀಸರ ಸಹಾಯ ಪಡೆದು ಬೆಳಗ್ಗೆಯಿಂದಲೆ ಸುಲ್ತಾನ ಸ್ಟ್ರೀಟ್‌ನಲ್ಲಿರುವ ಮನೆಯಲ್ಲಿ ಪುಣೆಯ ಅಧಿಕಾರಿಗಳು ಹುಡುಕಾಟ ಆರಂಭಿಸಿದ್ದರು. ಮನೆಯಲ್ಲಿ ನಗದು ಪತ್ತೆಯಾಗಿಲ್ಲ. ಆದರೆ ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡದ ಕಾರಣ ಆರೋಪಿಯ ಆಧಾರ್ ಕಾರ್ಡ ಮತ್ತಿತರ ದಾಖಲೆಗಳ ಸಮೇತ ವಶಕ್ಕೆ ಪಡೆದು ಕಮಿಷನರ್ ಸೂಚನೆ ಮೇರೆಗೆ ಮಹ್ಮದ್ ಫರಾನ್‌ನನ್ನು ಮುಂಬೈಗೆ ಕರೆದೊಯ್ದಿದ್ದಾರೆ.
ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರೆದಿದ್ದು, ಈತನ ಮೇಲೆ ಇನ್ನು ಹಲವು ಪ್ರಕರಣಗಳು ಇವೆ ಎನ್ನಲಾಗಿದೆ.