ಭಟ್ಕಳ: ಜಾಲಿ ಪಟ್ಟಣ ಪಂಚಾಯತ್ನ 13 ವಾರ್ಡ್ನ ಚುನಾವಣೆಯಲ್ಲಿ 6 ಪಕ್ಷೇತರರು ಅತೀ ಹೆಚ್ಚು ಗೆಲುವು ಸಾಧಿಸಿರುವುದರ ಮೂಲಕ ತಮ್ಮ ಪ್ರಭಾವ ತೋರಿಸಿದ್ದು, 7 ಅವಿರೋಧ ಆಯ್ಕೆ ಸೇರಿ ಬಹುಪಾಲು ತಂಜೀಂ ಬೆಂಬಲಿತ ಅಭ್ಯರ್ಥಿಗಳು ಒಟ್ಟಾರೆ ಗೆಲುವು ಸಾಧಿಸಿದಂತಾಗಿದೆ.
ಸೋಮವಾರದಂದು ನಡೆದ ಚುನಾವಣೆಯಲ್ಲಿ ಅಭ್ಯರ್ಥಿಗಳ ಮತ ಭವಿಷ್ಯವು ಗುರುವಾರದಂದು ಇಲ್ಲಿನ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ನಡೆದ ಮತ ಎಣಿಕೆಯ ಮೂಲಕ ಕೊನೆಗೊಂಡಿತು. ಜಾಲಿ ಪಟ್ಟಣ ಪಂಚಾಯತ್ನ ಒಟ್ಟು 20 ವಾರ್ಡ್ಗಳಲ್ಲಿ 7 ಸ್ಥಾನವನ್ನು ಅವಿರೋಧವಾಗಿ ಪಕ್ಷೇತರರು ಆಯ್ಕೆಯಾಗಿದ್ದರು. ಬಳಿಕ ನಿಗದಿಯಂತೆ ಚುನಾವಣೆ 13 ವಾರ್ಡ್ಗಳಲ್ಲಿ ನಡೆದಿದ್ದು, ಇದರಲ್ಲಿ 4 ಕಾಂಗ್ರೆಸ್, 3 ಬಿಜೆಪಿ, 6 ಸ್ಥಾನದಲ್ಲಿ ಪಕ್ಷೇತರ ಗೆಲುವು ಕಾಣುವ ಮೂಲಕ ಒಟ್ಟು 13 ಸ್ಥಾನದಲ್ಲಿ ಪಕ್ಷೇತರರು ಗೆಲುವು ಕಂಡಿದ್ದಾರೆ.
ಬಹುತೇಕ ಪಕ್ಷೇತರರು ತಂಜೀಂ ಸಂಸ್ಥೆ ಬೆಂಬಲದಿಂದ ಕಣಕ್ಕೆ ಇಳಿದಿದ್ದು, ಮೊದಲೇ ಅವರ ಗೆಲುವು ನಿಗದಿಪಡಿಸಿಕೊಂಡಂತೆ ವಿಶ್ವಾಸದಲ್ಲಿದ್ದರು. ಇನ್ನು ಈ ಬಾರಿ ಆಶ್ಚರ್ಯಕರ ರೀತಿಯಲ್ಲಿ 72 ನೋಟಾ ಮತ ಹಾಕಿರುವ ಮತದಾರರು 3, 8 ಹಾಗೂ 11ನೇ ವಾರ್ಡ್ನಲ್ಲಿ ಕ್ರಮವಾಗಿ 12, 12 ಮತ್ತು 15 ನೋಟಾ ಮತ ಚಲಾಯಿಸಿದ್ದಾರೆ.