ಕರ್ನಾಟಕ

karnataka

ETV Bharat / state

ಮುಂಗಾರಿಗೂ ಮುನ್ನವೇ ವರುಣನ ಆಗಮನ: ಗರಿಗೆದರಿದ ಕೃಷಿ ಚಟುವಟಿಕೆ

ಹವಾಮಾನ ವೈಪರೀತ್ಯದಿಂದ ಉಂಟಾದ ನಿಸರ್ಗ ಚಂಡಮಾರುತದಿಂದ ಮುಂಗಾರು ಪ್ರವೇಶಕ್ಕೂ ಪೂರ್ವವೇ ಮಳೆರಾಯ ಧರೆಗಿಳಿದಿದ್ದಾನೆ. ಉತ್ತಮ ಮಳೆಯಿಂದ ರೈತರು ಕೃಷಿ ಚಟುವಟಿಕೆ ಬಿರುಸುಗೊಳಿಸಿದ್ದಾರೆ.

Bhatkal: Farmers engaged in agricultural activities
ಮುಂಗಾರಿಗೂ ಮೊದಲೆ ಸುರಿದ ವರುಣ: ಕೃಷಿ ಚಟುವಟಿಕೆಯಲ್ಲಿ ನಿರತರಾದ ರೈತರು

By

Published : Jun 9, 2020, 12:17 AM IST

ಭಟ್ಕಳ:ಹವಾಮಾನ ವೈಪರೀತ್ಯದಿಂದ ಉಂಟಾದ ನಿಸರ್ಗ ಚಂಡಮಾರುತದಿಂದ ಮುಂಗಾರು ಪ್ರವೇಶಕ್ಕೂ ಪೂರ್ವವೇ ಮಳೆ ಆರಂಭಗೊಂಡ ಹಿನ್ನೆಲೆ ತಾಲೂಕಿನಲ್ಲಿ ಕೃಷಿ ಚಟುವಟಿಕೆ ಚುರುಕಾಗಿದೆ.

ಮುಂಗಾರಿಗೂ ಮೊದಲೆ ಸುರಿದ ವರುಣ: ಕೃಷಿ ಚಟುವಟಿಕೆಯಲ್ಲಿ ನಿರತರಾದ ರೈತರು

ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ಧಾರಾಕಾರ ಮಳೆ ಸುರಿದ ಹಿನ್ನೆಲೆ ರೈತರು ಕೊರೊನಾ ಭೀತಿ ನಡುವೆಯೂ ರೈತ ಸಂಪರ್ಕ ಕೇಂದ್ರಕ್ಕೆ ತೆರಳಿ ಭತ್ತದ ಬೀಜ ಖರೀದಿಸಿ ಬಿತ್ತನೆ ಕಾರ್ಯದಲ್ಲಿ ನಿರತರಾಗಿದ್ದಾರೆ.

ಭಟ್ಕಳ ಜಿಲ್ಲೆಯ ಸೂಸಗಡಿ ಹೋಬಳಿಯ ಕೃಷಿ ಇಲಾಖೆ ಕಚೇರಿಯಲ್ಲಿ 373.75 ಕ್ವಿಂಟಾಲ್ ಹಾಗೂ ಮಾವಳ್ಳಿ ಹೋಬಳಿಯಲ್ಲಿ 676.20 ಕ್ವಿಂಟಾಲ್ ಭತ್ತದ ಬೀಜ ದಾಸ್ತಾನು ಮಾಡಲಾಗಿದೆ. ಇದರಲ್ಲಿ ಈಗಾಗಲೇ ಸೂಸಗಡಿಯಲ್ಲಿ 339 ಕ್ವಿಂಟಾಲ್ ಮತ್ತು ಮಾವಳ್ಳಿಯಲ್ಲಿ 667.50 ಕ್ವಿಂಟಾಲ್ ಸೇರಿ ಒಟ್ಟೂ 1006.50 ಕ್ವಿಂಟಾಲ್ ಭತ್ತದ ಬೀಜ ವಿತರಣೆ ಆಗಿದೆ. ಸದ್ಯ ಸೂಸಗಡಿ ಕೃಷಿ ಇಲಾಖೆಯಲ್ಲಿ 34.75 ಕ್ವಿಂಟಾಲ್ ಮತ್ತು ಮಾವಳ್ಳಿಯಲ್ಲಿ 8.70 ಕ್ವಿಂಟಾಲ್ ಸೇರಿದಂತೆ ಒಟ್ಟು ತಾಲೂಕಿನಲ್ಲಿ 43.45 ಕ್ವಿಂಟಾಲ್​ ಭತ್ತದ ಬೀಜ ಸಂಗ್ರಹವಿದ್ದು, ಜೂನ್​ ಅಂತ್ಯದವರೆಗೂ ವಿತರಣೆ ಕಾರ್ಯ ಮುಂದುವರೆಯಲಿದೆ.

ಭಟ್ಕಳದಲ್ಲಿ ಒಟ್ಟೂ 3000 ಹೆಕ್ಟೇರ್​ ಜಮೀನಿನಲ್ಲಿ ಭತ್ತ ಬೆಳೆಯಲಾಗುತ್ತಿದ್ದು, ಈ ಪೈಕಿ ಸೂಸಗಡಿಯಲ್ಲಿ 1450 ಹೆಕ್ಟೇರ್​ ಹಾಗೂ ಮಾವಳ್ಳಿ ಹೋಬಳಿಯಲ್ಲಿ 1550 ಹೆಕ್ಟೇರ್​ ಕೃಷಿ ಜಮೀನಿನಲ್ಲಿ ಭತ್ತ ಬೆಳೆಯುವ ಗುರಿ ಹೊಂದಲಾಗಿದೆ.

ವಿಶೇಷವಾಗಿ ಅಧಿಕ ಇಳುವರಿ ನೀಡುವ ಭತ್ತದ ತಳಿಗಳಾದ ಜಯಾ, ಎಂಟಿಯು 1001, ಎಂಓ-4, ಹಾಗೂ ಹೈಬ್ರೀಡ್ ಭತ್ತದ ಪಿಏಸಿ 837 ಮೂರು ಜಾತಿಯ ಬೀಜ ವಿತರಣೆ ಮಾಡಲಾಗಿದೆ. ತಾಲೂಕಿನಲ್ಲಿ ನಾಟಿ ವಿಧಾನ, ಯಾಂತ್ರಿಕೃತ ನಾಟಿ ಹಾಗೂ ಸಾಲು ನಾಟಿ ವಿಧಾನ ಹೀಗೆ ಮೂರೂ ವಿಧದ ಬೇಸಾಯ ಪದ್ದತಿ ಅನುಸರಿಸಲಾಗುತ್ತಿದೆ. ಈಗಾಗಲೇ ಕೃಷಿ ಕೇಂದ್ರಗಳಿಂದ ಬಿತ್ತನೆಯ ಬೀಜ ಪಡೆದು ಕೃಷಿ ಕಾರ್ಯ ಪ್ರಾರಂಭಿಸಲು ರೈತರು ಸಿದ್ಧತೆ ನಡೆಸಿದ್ದಾರೆ.

ABOUT THE AUTHOR

...view details