ಭಟ್ಕಳ: ನೂರು ವರ್ಷ ಪೂರೈಸಿರುವ ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯಲ್ಲಿ ‘ಅಂಜುಮನ್ ಸೆಂಟರ್ ಆಫ್ ಎಕ್ಸಲೆನ್ಸ್’ ಕೇಂದ್ರವನ್ನು ಆರಂಭಿಸಲು ಇತ್ತೀಚೆಗೆ ನಡೆದ ಕಾರ್ಯಾಕಾರಿ ಸಮಿತಿ ಸಭೆಯಲ್ಲಿ ನಿರ್ಣಯಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಮುಹಮ್ಮದ್ ಮುಝಮ್ಮಿಲ್ ಕಾಝಿಯಾ ತಿಳಿಸಿದರು.
ಭಟ್ಕಳ: ‘ಅಂಜುಮನ್ ಸೆಂಟರ್ ಆಫ್ ಎಕ್ಸಲೆನ್ಸ್’ ಕೇಂದ್ರ ಆರಂಭಕ್ಕೆ ನಿರ್ಣಯ ಭಾನುವಾರ ಅಂಜುಮನಾಬಾದ್ ನಲ್ಲಿರುವ ನೂತನ ಕಚೇರಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿ ಮಾತನಾಡಿದ ಕಾಝಿಯಾ, 1919ರಲ್ಲಿ ಕೆ.ಜಿ ತರಗತಿಗಳಿಂದ ಆರಂಭಗೊಂಡಿದ್ದ ಈ ಸಂಸ್ಥೆಯಲ್ಲೀಗ ಪಿ.ಜಿ ಕೇಂದ್ರ ಸೇರಿದಂತೆ ಹಲವು ಪದವಿ ತರಗತಿಗಳು ನಡೆಯುತ್ತಿವೆ. ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕವಾಗಿ ಸಿದ್ದಿಗೊಳಿಸುವ ನಿಟ್ಟಿನಲ್ಲಿ ‘ಅಂಜುಮನ್ ಸೆಂಟರ್ ಆಫ್ ಎಕ್ಸಲೆನ್ಸ್’ ಕೇಂದ್ರವನ್ನು ಸ್ಥಾಪಿಸುವಲ್ಲಿ ಮುನ್ನಡಿ ಇಟ್ಟಿದೆ.
ಇದಕ್ಕಾಗಿ ಎಲ್ಲ ರೀತಿಯ ರೂಪುರೇಶೆಗಳನ್ನು ಈಗಾಗಲೆ ಸಿದ್ದಪಡಿಸಿದ್ದು, ಇದಕ್ಕಾಗಿ ಇಂಜಿನೀಯರಿಂಗ್, ಪದವಿ, ಪಿಯು, ಬಿಬಿಎ ಮತ್ತು ಬಿಎಡ್ ಪ್ರಾಂಶುಪಾಲರು ಹಾಗೂ ಶಿಕ್ಷಣ ತಜ್ಞರನ್ನೊಳಗೊಂಡ ಸಮಿತಿಯನ್ನು ರಚಿಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಜಿಲ್ಲೆ ಹಾಗೂ ನೆರೆಯ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಅನುಕೂಲ ದೊರಕಿಸಿಕೊಡುವ ನಿಟ್ಟಿನಲ್ಲಿ ಅಂಜುಮನ್ ಸಂಸ್ಥೆ ಕಾರ್ಯಪ್ರವೃತ್ತಗೊಂಡಿದ್ದು ಜೆಇಇ ಮತ್ತು ನೀಟ್ ತರಬೇತಿಯನ್ನು ಪರಿಣಿತಿ ಪಡೆದ ತರಬೇತುದಾರರ ಸೇವೆಯನ್ನು ಪಡೆಯುವದರ ಮೂಲಕ ಆರಂಭಿಸಲಾಗುತ್ತಿದೆ. ಅಲ್ಲದೆ ನಮ್ಮ ಸಂಸ್ಥೆಯ ವಿವಿಧ ಕೋರ್ಸ್‍ಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗಾಗಿ ವಿಶೇಷ ಕೋರ್ಸುಗಳನ್ನು ನಡೆಸಲು ಯೋಜಿಸಲಾಗಿದೆ.
ಲಕ್ಷಾಂತರ ಹಣ ಖರ್ಚು ಮಾಡಿ ಬೆಂಗಳೂರು ಮತ್ತು ಮಂಗಳೂರು ಹೋಗಿ ಅಲ್ಲಿ ಅಲ್ಪಾವಧಿ ಕೋರ್ಸ್ ಗಳನ್ನು ಪಡೆಯುವವರಿಗೆ ಇಲ್ಲಿಯೆ ಕಡಿಮೆ ಕರ್ಚಿನಲ್ಲಿ ಉತ್ತಮ ಅಲ್ಪಾವಧಿಯ ತರಬೇತಿ ಕೋರ್ಸುಗಳನ್ನು ನಡೆಸಲಾಗುವುದು. ಮುಂದಿನ ದಿನಗಳಲ್ಲಿ ಇದೇ ಕೇಂದ್ರದೊಂದಿಗೆ ಯುಪಿಎಸ್ಸಿ ತರಬೇತಿಯನ್ನು ನೀಡಿ ನಮ್ಮ ಜಿಲ್ಲೆಯ ಎಲ್ಲ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಐಎಎಸ್, ಐಪಿಎಸ್, ಮತ್ತು ಉನ್ನತ ನಾಗರಿಕ ಹುದ್ದೆಗಳನ್ನು ಅಲಂಕರಿಸುವಂತೆ ಮಾಡುವುದು ಅಂಜುಮನ್ ಸಂಸ್ಥೆಯ ಉದ್ದೇಶವಾಗಿದೆ ಎಂದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಇಸ್ಹಾಖ್ ಶಾಬಂದ್ರಿ, ‘ಅಂಜುಮನ್ ಸೆಂಟರ್ ಆಫ್ ಎಕ್ಸಲೆನ್ಸ್’ ಕೇಂದ್ರ ಸಂಚಾಲಕ ಅಫ್ತಾಬ್ ಖಮರಿ, ಅಂಜುಮನ್ ಸಂಸ್ಥೆಯ ಉಪಾಧ್ಯಕ್ಷ ಸಾದಿಕ್ ಪಿಲ್ಲೂರು ಮತ್ತಿತರರು ಉಪಸ್ಥಿತರಿದ್ದರು.