ಭಟ್ಕಳ : ಭಾರತೀಯ ಜನತಾ ಪಾರ್ಟಿಯ ಭಟ್ಕಳ ಮಂಡಲದ ನೂತನ ಅಧ್ಯಕ್ಷರಾಗಿ ಸುಬ್ರಾಯ ದೇವಾಡಿಗ ಅವರನ್ನು ಘೋಷಣೆ ಮಾಡಲಾಯಿತು.
ಭಟ್ಕಳ ಬಿಜೆಪಿ ಘಟಕಕ್ಕೆ ನೂತನ ಅಧ್ಯಕ್ಷ ಪದಗ್ರಹಣ : ಕೃಷ್ಣ ನಾಯ್ಕ ಆಸರಕೇರಿಯಿಂದ ಅಸಮಧಾನ ಇಲ್ಲಿನ ಆಸರಕೇರಿ ನಾಮಧಾರಿ ಸಭಾಭವನದಲ್ಲಿ ಚುನಾವಣೆ ವೀಕ್ಷಕರು ಹಾಗೂ ಜಿಲ್ಲಾ ಬಿಜೆಪಿ ಮುಖಂಡರ ನೇತೃತ್ವದಲ್ಲಿ ನೂತನ ಅಧ್ಯಕ್ಷರ ಘೋಷಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾತನಾಡಿದ ಶಾಸಕ ಸುನೀಲ ನಾಯ್ಕ, ಅಹಂಕಾರವನ್ನು ತೋರದೆ ಕಾರ್ಯಕರ್ತರು, ಮುಖಂಡರೊಂದಿಗೆ ಮೊದಲಿನಂತೆ ಇದ್ದೇನೆ, ಇರಲಿದ್ದೇನೆ. ಭಟ್ಕಳದಲ್ಲಿ ವ್ಯಕ್ತಿಯಲ್ಲ ಬಿಜೆಪಿ ಶಾಶ್ವತವಾಗಿರಬೇಕು ಎಂದರು.
ಪಕ್ಷದ ಸಿದ್ಧಾಂತಕ್ಕಿಂತ ಯಾವುದು ದೊಡ್ಡದಲ್ಲ. ಶಾಸಕನಾದ ನಾನು ಪಕ್ಷ ಹಾಗೂ ಕಾರ್ಯಕರ್ತರು ತಲೆತಗ್ಗಿಸುವ ಕೆಲಸ ಮಾಡುವುದಿಲ್ಲ. ಮುಂದಿನ ದಿನದಲ್ಲಿ ಬರಲಿರುವ ಸೊಸೈಟಿ, ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಯನ್ನು ಹೊಸ ತಾಲೂಕು ಘಟಕದ ಅಧ್ಯಕ್ಷರೊಂದಿಗೆ ಎದುರಿಸಿ ಗೆಲ್ಲಬೇಕಿದೆ ಎಂದರು.
ಅಧ್ಯಕ್ಷ ಸ್ಥಾನ ಸಿಗುವ ಅಚ್ಛೇ ದಿನ್ ಬರಲೇ ಇಲ್ಲ :ದೇಶದಲ್ಲಿ ಅಚ್ಛೇ ದಿನ್ ನಡೆಯುತ್ತಿದ್ದರೆ ಭಟ್ಕಳದಲ್ಲಿನ ಕೃಷ್ಣ ನಾಯ್ಕಗೆ ಅಧ್ಯಕ್ಷ ಸ್ಥಾನ ಸಿಗುವ ಅಚ್ಚೇ ದಿನ್ ಬರಲೇ ಇಲ್ಲ ಎಂದು ಕೃಷ್ಣ ನಾಯ್ಕ ಅಸಮಧಾನ ಹೊರಹಾಕಿದ್ದಾರೆ. ಈ ಹಿಂದೆ ಕ್ಷೇತ್ರಾಧ್ಯಕ್ಷನಾಗಿದ್ದಾಗ ಪಕ್ಷದಲ್ಲಿ ಕೆಟ್ಟ ಒಳ ಬಣದಿಂದ ನನ್ನನ್ನು 6 ತಿಂಗಳಿಗೆ ಸ್ಥಾನದಿಂದ ಕೆಳಗಿಳಿಯುವಂತೆ ಮಾಡಿದರು. ಕಳೆದ ಬಾರಿಯೂ ನಾನು ಮಂಡಲಾಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದೆ, ಆದರೆ ಏನೇನೋ ಕಾರಣ ಹೇಳಿ ನನ್ನನ್ನು ಬಲಿ ಕೊಟ್ಟಿದ್ದಾರೆಂದು ಅಸಮಧಾನ ಹೊರಹಾಕಿದರು.
15 ದಿನದಲ್ಲಿ ಜಿಲ್ಲಾ ಕಮಿಟಿ ಆಗಲಿದ್ದು ಅದರ ನಂತರ ನಾನು ಒಳ್ಳೆಯ ನಿರ್ಧಾರ ಹಾಗೂ ಕೆಟ್ಟ ನಿರ್ಧಾರ ತೆಗೆದುಕೊಳ್ಳಲಿದ್ದೇನೆ. ನನ್ನಂತ ಕೋಪಿಷ್ಟನನ್ನು ನಾಯಕನ್ನಾಗಿ ಸ್ವೀಕರಿಸಿದ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದೇ ವೇಳೆ ಬಿಜೆಪಿ ಪ್ರಮುಖರಾದ ಚಂದ್ರು ನಾಯ್ಕ ಸಭೆಯ ಮಧ್ಯದಲ್ಲಿ ಎದ್ದು ನಿಂತು ಕೃಷ್ಣ ನಾಯ್ಕ ಆಸರಕೇರಿ ಅವರಿಗೆ ಜಿಲ್ಲಾ ಕಮಿಟಿಯಲ್ಲಿ ಸೂಕ್ತ ಸ್ಥಾನ ನೀಡಬೇಕೆಂದು ವಿನೋದ ಪ್ರಭು ಅವರಿಗೆ ಮನವಿ ಮಾಡಿದರು.
ಈ ಸಂಧರ್ಭದಲ್ಲಿ ನೂತನ ಅಧ್ಯಕ್ಷ ಸುಬ್ರಾಯ ದೇವಾಡಿಗ ಅವರಿಗೆ ನಿರ್ಗಮಿತ ಅಧ್ಯಕ್ಷ ರಾಜೇಶ ನಾಯ್ಕ ಅಧ್ಯಕ್ಷ ಸ್ಥಾನದ ಜವಾಬ್ದಾರಿಯನ್ನು ಹಸ್ತಾಂತರಿಸಿ ಪಕ್ಷ ಮೊದಲು ಆಮೇಲೆ ಕುಟುಂಬ ಎಂದು ಹೇಳಿದರು. ಹಾಗೂ ಇದೇ ವೇಳೆ ಪುರಸಭೆ ಸದಸ್ಯ ರಾಘವೇಂದ್ರ ಗವಾಳಿ ಅವರು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಗೊಂಡರು.