ಕರ್ನಾಟಕ

karnataka

ETV Bharat / state

'ಕಾರವಾರ'ವನ್ನು 'ಬೆಟರ್​' ಮಾಡ ಹೊರಟಿದೆ ಈ ಮಾದರಿ ತಂಡ! - Karwar News 2020

ಕೊರೊನಾ ಲಾಕ್​ಡೌನ್‌ನಿಂದಾಗಿ ಮನೆಯಲ್ಲೇ ಕೂತು ಆಲಸ್ಯದಲ್ಲಿದ್ದ ಮಂದಿ ಈಗ ಬೆಟರ್ ಕಾರವಾರದ ಮೂಲಕ ಚಟುವಟಿಕೆ ನಿರತರಾಗಿದ್ದಾರೆ. ಬಣ್ಣ ಮಾಸಿದ್ದ ಜಿಲ್ಲಾಧಿಕಾರಿ ಕಚೇರಿಯ ಗೋಡೆ ಈಗ ಅಂದಗೊಂಡಿದ್ದು, ರಸ್ತೆಯಲ್ಲಿ ಸಂಚರಿಸುವವರು, ವಾಹನ ಸವಾರರು ಗೋಡೆಚಿತ್ರಗಳನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ..

'ಬೆಟರ್ ಕಾರವಾರ' ತಂಡದಿಂದ ಕಾರ್ಯ
'ಬೆಟರ್ ಕಾರವಾರ' ತಂಡದಿಂದ ಕಾರ್ಯ

By

Published : Dec 29, 2020, 11:41 AM IST

ಕಾರವಾರ :ಕೊರೊನಾ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳು ಮುಚ್ಚಿದ್ದು, ಇದೀಗ ಯುವಜನತೆ ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿದ್ದಾರೆ. ಇನ್ನೊಂದೆಡೆ ಲಾಕ್​ಡೌನ್​ನಿಂದಾಗಿ ಊರಿಗೆ ವಾಪಸ್ಸಾಗಿ ವರ್ಕ್ ಫ್ರಮ್ ಹೋಮ್​ ಮಾಡುತ್ತಿರುವವರೂ ಇದ್ದಾರೆ. ಇವರೆಲ್ಲರನ್ನೂ ಒಟ್ಟುಗೂಡಿಸಿದ 'ಬೆಟರ್ ಕಾರವಾರ' ತಂಡವೊಂದು ಕಾರವಾರ ನಗರವನ್ನು ಅಂದಗೊಳಿಸುವ ಕಾರ್ಯಕ್ಕೆ ಮುಂದಾಗಿದೆ.

'ಬೆಟರ್ ಕಾರವಾರ' ತಂಡದಿಂದ ಗೋಡೆಗಳಿಗೆ ಬಣ್ಣ ಬಳಿಯುವ ಕಾರ್ಯ..

ಅಕ್ಟೋಬರ್ 2ರಿಂದ ಸ್ವಚ್ಛತಾ ಅಭಿಯಾನದ ಮೂಲಕ ಸಾಮಾಜಿಕ ಕಾರ್ಯಕ್ಕೆ ಇಳಿದಿದ್ದ ಬೆಟರ್ ಕಾರವಾರ ತಂಡ, ಇದೀಗ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಜಿಲ್ಲಾಧಿಕಾರಿ ಕಚೇರಿಯ ಗೋಡೆಗಳನ್ನು ಬಣ್ಣ ಬಣ್ಣದ ಚಿತ್ತಾರಗಳ ಮೂಲಕ ಅಂದಗೊಳಿಸಿದೆ‌.

ಪ್ರೀತೇಶ್ ರಾಣೆ, ಸೂರಜ್ ಗೋವೇಕರ್, ನಿತೇಶ್ ನಾಯ್ಕ, ಪ್ರಸಾದ್ ಸಾದಿಯೆ, ಅಮಾನ್ ಶೇಖ್ ಹಾಗೂ ಉಮಾ ಶಂಕರ್ ಎನ್ನುವವರು ಸ್ಥಾಪಿಸಿದ ಈ ಬೆಟರ್ ಕಾರವಾರ ತಂಡ, ಗಾಂಧಿ ಜಯಂತಿಯಂದು ಸ್ವಚ್ಛತಾ ಕಾರ್ಯ ಆರಂಭಿಸಿ 12 ವಾರಗಳ ಕಾಲ ಕಾರವಾರ ನಗರದ ವಿವಿಧೆಡೆ ಸ್ವಚ್ಛಗೊಳಿಸಿದ್ದಾರೆ.

ಈ ನಡುವೆ ಜಿಲ್ಲಾಧಿಕಾರಿ ಕಚೇರಿಯ ಗೋಡೆಗೆ ಬಣ್ಣ ಬಳಿಯಬೇಕೆಂಬ ಯೋಜನೆಯನ್ನು ರಚಿಸಿ, ತಮ್ಮ ಇನ್​ಸ್ಟಾಗ್ರಾಂ, ಫೇಸ್​ಬುಕ್​ನಂತಹ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಆಸಕ್ತ ಕಲಾವಿದರಿಗೆ ಆಹ್ವಾನಿಸಿದ್ದರು. ನಿರೀಕ್ಷೆಗೂ ಮೀರಿ 30 ಕಲಾವಿದರು ಬೆಟರ್ ಕಾರವಾರ ತಂಡದೊಂದಿಗೆ ಕೈಜೋಡಿಸಿದ್ದಾರೆ.

ಅಲ್ಲದೇ, ಕೇವಲ ಒಂದೇ ದಿನದಲ್ಲಿ 30 ಕಲಾವಿದರು ಸೇರಿಕೊಂಡು ಜಿಲ್ಲಾಧಿಕಾರಿ ಕಚೇರಿಯ 40 ಗೋಡೆಗಳಲ್ಲಿ 40 ಚಿತ್ರ ಬಿಡಿಸಿ ಬಣ್ಣ ತುಂಬಿದ್ದಾರೆ. ಭಾವೈಕ್ಯತೆ, ಒಗ್ಗಟ್ಟು, ಕಲೆ- ಸಂಸ್ಕೃತಿ, ಪ್ರವಾಸೋದ್ಯಮ, ಜಾಗೃತಿ ಸಂದೇಶಗಳನ್ನು ಕಲಾವಿದರು ಗೋಡೆಗಳಲ್ಲಿ ಚಿತ್ರಿಸಿದ್ದಾರೆ.

ಈ ಕಲಾವಿದರ ಪೈಕಿ ಹಲವಾರು ಮಂದಿ ವಿವಿಧ ಶಾಲಾ-ಕಾಲೇಜಿನ ವಿದ್ಯಾರ್ಥಿಗಳಿದ್ದರೆ, ವರ್ಕ್‌ಫ್ರಮ್ ಹೋಂನಲ್ಲಿರುವ ಉದ್ಯೋಗಿಗಳು, ಗೃಹಿಣಿಯರು, ಎನ್​ಸಿಸಿ ಕೆಡೆಟ್ಸ್​ಗಳು ಭಾಗವಹಿಸಿದ್ದಾರೆ ಅಂತಾರೆ ತಂಡದ ಸದಸ್ಯೆ ಸಂಚಿತಾ.

ಕೊರೊನಾ ಲಾಕ್​ಡೌನ್‌ನಿಂದಾಗಿ ಮನೆಯಲ್ಲೇ ಕೂತು ಆಲಸ್ಯದಲ್ಲಿದ್ದ ಮಂದಿ ಈಗ ಬೆಟರ್ ಕಾರವಾರದ ಮೂಲಕ ಚಟುವಟಿಕೆ ನಿರತರಾಗಿದ್ದಾರೆ. ಬಣ್ಣ ಮಾಸಿದ್ದ ಜಿಲ್ಲಾಧಿಕಾರಿ ಕಚೇರಿಯ ಗೋಡೆ ಈಗ ಅಂದಗೊಂಡಿದ್ದು, ರಸ್ತೆಯಲ್ಲಿ ಸಂಚರಿಸುವವರು, ವಾಹನ ಸವಾರರು ಗೋಡೆಚಿತ್ರಗಳನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

ABOUT THE AUTHOR

...view details