ಕಾರವಾರ: ವೀಳೆದ್ಯೆಲೆ ಬೆಳೆಗಾರರಿಗೆ ಹಿಂದಿನ ವರ್ಷ ಅತಿವೃಷ್ಟಿಯ ಪರಿಣಾಮ ಅಪಾರ ನಷ್ಟ ಉಂಟಾಗಿತ್ತು. ಪ್ರಸಕ್ತ ವರ್ಷ ಜಾರಿಯಲ್ಲಿರುವ ಲಾಕ್ಡೌನ್ನಿಂದಾಗಿ ಫಸಲು ಮಾರುಕಟ್ಟೆಗೆ ತರಲಾಗದೆ, ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ವೀಳ್ಯೆದೆಲೆ ಬೆಳೆಗಾರರಿಗೆ ಸಂಕಷ್ಟ ಉತ್ತರ ಕನ್ನಡ ಜಿಲ್ಲೆ ಹೊನ್ನಾವರದ ವೀಳ್ಯದೆಲೆಗೆ ಸಾಕಷ್ಟು ಬೇಡಿಕೆಯಿದೆ. ಕಳೆದ 8-10 ದಶಕಗಳಿಂದ ಪಾಕಿಸ್ತಾನದ ಲಾಹೋರ್, ದೆಹಲಿ ಸೇರಿದಂತೆ ದೇಶದ ದೊಡ್ಡ ನಗರಗಳಿಗೆ ಸಾಗಣೆ ಆಗುತ್ತಿದೆ. ಕೊರೊನಾ ಲಾಕ್ಡೌನ್ನಿಂದಾಗಿ ಫಸಲು ಕೊಯ್ಲು ಆಗದೆ ಗಿಡದಲ್ಲಿ ಒಣಗುತ್ತಿದೆ. ಇದರಿಂದ ಬೆಳೆಗಾರರ ಬದುಕು ಸಹ ಬಾಡಿದಂತಾಗಿದೆ.
ಬೇಡಿಕೆ ಇರುವ ಸಮಯದಲ್ಲಿ ವೀಳ್ಯದೆಲೆ ಸಾಗಣೆಗೆ ಲಾಕ್‌ಡೌನ್ ಅಡ್ಡಿಯಾಗಿದೆ. ನವೆಂಬರ್- ಮೇ ಮಧ್ಯೆ ವೀಳ್ಯದೆಲೆ ದೊಡ್ಡ ಮಟ್ಟದಲ್ಲಿ ವ್ಯಾಪಾರ ಆಗುತ್ತದೆ. ಈ ಭಾರಿ ಕೊಯ್ಲು ಮಾಡಲು ಸಾಧ್ಯವಾಗಿಲ್ಲ. ಸಾರಿಗೆ ಸಂಪರ್ಕ ಸಂಪೂರ್ಣವಾಗಿ ಸ್ಥಗಿತ ಆಗಿದ್ದರಿಂದ ಬೆಳೆಗಾರರಿಗೆ ದೊಡ್ಡ ಮಟ್ಟದ ಹೊಡೆತ ನೀಡಿದೆ ಎನ್ನುತ್ತಾರೆ ಸ್ಥಳೀಯ ವ್ಯಾಪಾರಸ್ಥರು.
ವೀಳ್ಯೆದೆಲೆ ಬೆಳೆಗಾರರಿಗೆ ಸಂಕಷ್ಟ ಹೊನ್ನಾವರದಲ್ಲಿ ಅಡಿಕೆ, ಇತರ ಬೆಳೆಗಳ ಜೊತೆಗೆ ಸುಮಾರು 250 ಹೆಕ್ಟೇರ್ ಪ್ರದೇಶಗಳಲ್ಲಿ ವೀಳ್ಯದೆಲೆ ಬೆಳೆಯಲಾಗುತ್ತದೆ. ಸಾವಿರಾರು ಬೆಳೆಗಾರರಿ ಇದೊಂದು ಉಪ ಆದಾಯವಾಗಿದೆ. ಕೂಲಿ ಕಾರ್ಮಿಕರಿಗೂ ಕೊಯ್ಲಿನ ಸಮಯದಲ್ಲಿ ಕೆಲಸ ಸಿಗುತ್ತದೆ. ಸ್ಥಳೀಯವಾಗಿ ಅಲ್ಪ ವ್ಯಾಪಾರ ಆಗುತ್ತದೆ. ಆದರೆ, ಬೆಲೆ ತೀರ ಕಡಿಮೆ ಎನ್ನುತ್ತಾರೆ ಬೆಳೆಗಾರರು.
ಹಲವು ದಶಕಗಳಿಂದ ಚಟುವಟಿಕೆಯಿಂದ ಕೂಡಿರುತ್ತಿದ್ದ ಮಾರುಕಟ್ಟೆಗಳು ನಿಂತಿವೆ. ಮಾರಾಟಕ್ಕೆ ಹೊಸ ಮಾರುಕಟ್ಟೆ ಹುಡುಕುವುದು ದೊಡ್ಡ ಸವಾಲಾಗಿದೆ. ಮಳೆಗಾಲ ಆರಂಭವಾಗುತ್ತಿದ್ದಂತೆ ಎಲೆಯ ಬೇಡಿಕೆ ಕಳೆದುಕೊಳ್ಳಲಿದೆ. ವೀಳ್ಯದೆಲೆ ಬೆಳೆಯುವವರಿಗೂ ಸರ್ಕಾರ ಪರಿಹಾರ ನೀಡಬೇಕು ಎಂಬುದು ನಷ್ಟಕ್ಕೆ ಒಳಗಾದವರ ಬೇಡಿಕೆ.