ಕರ್ನಾಟಕ

karnataka

ETV Bharat / state

ಕಡಲತೀರ ಸ್ವಚ್ಛತೆ ಜೊತೆಗೆ ದೋಣಿ ಸ್ಪರ್ಧೆ: ಗಮನ ಸೆಳೆದ ಕಡಲಮಕ್ಕಳ ಬಲಪ್ರದರ್ಶನ - ಈಟಿವಿ ಭಾರತ ಕನ್ನಡ

ಅಂತಾರಾಷ್ಟ್ರೀಯ ಕಡಲತೀರದ ಸ್ವಚ್ಚತಾ ದಿನದ ಅಂಗವಾಗಿ ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಹಾರವಾಡ ಗ್ರಾಮದ ಕಡಲತೀರದಲ್ಲಿ ಸ್ವಚ್ಛತಾ ಕಾರ್ಯವನ್ನು ನಡೆಸಲಾಯಿತು. ಜೊತೆಗೆ ಗುಂಡು ಎಸೆತ, ಮ್ಯೂಸಿಕಲ್ ಚೇರ್, ಹಗ್ಗ ಜಗ್ಗಾಟ, ದೋಣಿ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಲಾಯಿತು.

beach-cleanup-and-competitions-held-at-karwar
ಕಡಲತೀರ ಸ್ವಚ್ಚತೆ ಜೊತೆಗೆ ದೋಣಿ ಸ್ಪರ್ಧೆ: ಗಮನ ಸೆಳೆದ ಕಡಲಮಕ್ಕಳ ಬಲಪ್ರದರ್ಶನ

By

Published : Sep 18, 2022, 6:32 PM IST

ಕಾರವಾರ (ಉತ್ತರಕನ್ನಡ): ಕಡಲತೀರದಲ್ಲಿ ವಾಸವಾಗಿರುವ ಮೀನುಗಾರರಲ್ಲಿ ಸ್ವಚ್ಚತೆ ಬಗೆಗೆ ಜಾಗೃತಿ ಮೂಡಿಸಿ ಆ ಮೂಲಕ ಕಡಲತೀರವನ್ನು ಪ್ರವಾಸಿಗರ ಸ್ನೇಹಿಯಾಗಿಸುವ ನಿಟ್ಟಿನಲ್ಲಿ ಕರಾವಳಿ ಕಾವಲು ಪಡೆ ಸ್ವಚ್ಚತಾ ಕಾರ್ಯ ಹಮ್ಮಿಕೊಂಡಿತ್ತು.ಇದರ ಜೊತೆಗೆ ವಿಭಿನ್ನ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಿ ಜನರಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಲಾಯಿತು.

ಒಂದೆಡೆ ಕಡಲತೀರದುದ್ದಕ್ಕೂ ಬಿದ್ದಿರುವ ತ್ಯಾಜ್ಯವನ್ನು ಸಂಗ್ರಹಿಸುತ್ತಿರುವ ಜನ, ಇನ್ನೊಂದೆಡೆ ನಾ ಮುಂದು ತಾ ಮುಂದು ಎಂದು ಸಮುದ್ರದಲ್ಲಿ ಹುಟ್ಟು ಹಾಕುತ್ತ ದೋಣಿ ಸ್ಪರ್ಧೆಯಲ್ಲಿ ಪಾಲ್ಗೊಂಡ ಮೀನುಗಾರರು, ಮತ್ತೊಂದೆಡೆ ಹಗ್ಗಜಗ್ಗಾಟದಲ್ಲಿ ಬಲಪ್ರದರ್ಶನ ನಡೆಸುತ್ತಿರುವ ಯುವಕರು ಈ ದೃಶ್ಯಗಳು ಕಂಡು ಬಂದಿದ್ದು ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಹಾರವಾಡ ಗ್ರಾಮದಲ್ಲಿ.

ಅಂತಾರಾಷ್ಟ್ರೀಯ ಕಡಲತೀರದ ಸ್ವಚ್ಛತಾ ದಿನ : ಅಂತಾರಾಷ್ಟ್ರೀಯ ಕಡಲತೀರದ ಸ್ವಚ್ಛತಾ ದಿನದ ಅಂಗವಾಗಿ ಬೆಲೆಕೇರಿಯ ಕರಾವಳಿ ಕಾವಲು ಪೊಲೀಸ್ ಠಾಣೆಯ ವತಿಯಿಂದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಇಲ್ಲಿನ ಕರಾವಳಿ ಕಾವಲು ಪೊಲೀಸರು ಹಾಗೂ ಸ್ಥಳೀಯ ಮೀನುಗಾರರು ಮತ್ತು ಅವರ ಕುಟುಂಬಸ್ಥರು ಹಾರವಾಡದ ಕಡಲತೀರದಲ್ಲಿ ಸ್ವಚ್ಛತೆ ನಡೆಸಿದರು. ಕಡಲತೀರದುದ್ದಕ್ಕೂ ಬಿದ್ದಿದ್ದ ಪ್ಲಾಸ್ಟಿಕ್, ಬಟ್ಟೆ, ಬಾಟಲ್, ಬಲೆ ಸೇರಿದಂತೆ ತರಗೆಲೆಯ ತ್ಯಾಜ್ಯವನ್ನು ಆಯ್ದು ಸ್ವಚ್ಛಗೊಳಿಸುವ ಕಾರ್ಯ ಮಾಡಲಾಯಿತು.

ಕಡಲತೀರ ಸ್ವಚ್ಛತೆ ಜೊತೆಗೆ ದೋಣಿ ಸ್ಪರ್ಧೆ: ಗಮನ ಸೆಳೆದ ಕಡಲಮಕ್ಕಳ ಬಲಪ್ರದರ್ಶನ

ಗಮನ ಸೆಳೆದ ದೋಣಿ ಸ್ಪರ್ಧೆ :ಕಡಲ ತೀರದ ಸ್ವಚ್ಛತೆಯ ಬಳಿಕ ಸ್ಥಳೀಯರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.ಇದರ ಜೊತೆಗೆ ದೋಣಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಇಬ್ಬರಂತೆ ಒಟ್ಟು 12 ದೋಣಿಗಳಲ್ಲಿ ಸ್ಪರ್ಧೆ ನಡೆಯಿತು. ನಿತ್ಯ ಕಸುಬಿನಲ್ಲಿ ನಿಧಾನವಾಗಿ ದೋಣಿ ಓಡಿಸುತ್ತಿದ್ದವರು ಈ ಭಾರಿ ಸ್ಪರ್ಧೆಗೆ ಬಿದ್ದು ಇರುವ ಶಕ್ತಿಯೆನ್ನೆಲ್ಲ ಬಳಸಿ ದೋಣಿ ಓಡಿಸಿದ್ದು ಎಲ್ಲರ ಗಮನ ಸೆಳೆಯಿತು.

ಕಡಲತೀರದಲ್ಲಿರುವವರಿಗೆ ಕೇವಲ ಮೀನುಗಾರಿಕೆ ಮೂಲಕ ಜೀವನ ನಡೆಸುವುದು ಕಷ್ಟವಾಗಿರುವ ಬಗ್ಗೆ ಗಮನಕ್ಕೆ ಬಂದ ಹಿನ್ನೆಲೆ, ಕಡಲತೀರವನ್ನು ಸ್ವಚ್ಚಗೊಳಿಸಿ ಪ್ರವಾಸಿಸ್ನೇಹಿಯಾಗಿಸಲು ಪ್ರಯತ್ನಿಸಲಾಗುತ್ತಿದೆ. ಅದರಂತೆ ಇಂತಹ ಅಪರೂಪದ ಸ್ಪರ್ಧೆಗಳನ್ನು ಆಯೋಜಿಸಿ ಕಡಲತೀರವನ್ನು ಸ್ವಚ್ಛವಾಗಿಡಲು ಪ್ರಯತ್ನಿಸಲಾಗುತ್ತಿದೆ ಬೆಲೆಕೇರಿ ಸಿಎಸ್ ಪಿ ಠಾಣೆ ಇನ್ಸ್ ಸ್ಪೆಕ್ಟರ್ ಸುರೇಶ ನಾಯಕ ಹೇಳಿದ್ದಾರೆ.

ಸ್ವಚ್ಛತೆಯ ಬಳಿಕ ಸ್ಥಳೀಯರಿಗೆ ವಿವಿಧ ಸ್ಪರ್ಧೆ :ಇನ್ನು ದೋಣಿ ಸ್ಪರ್ಧೆ ಮಾತ್ರವಲ್ಲದೆ ಗುಂಡು ಎಸೆತ, ಹೆಣ್ಣು ಮಕ್ಕಳಿಗೆ ಮ್ಯೂಸಿಕಲ್ ಚೇರ್, ಹಗ್ಗ ಜಗ್ಗಾಟ ಸ್ಪರ್ಧೆಗಳೂ ನಡೆಯಿತು. ಹಗ್ಗ ಜಗ್ಗಾಟದಲ್ಲಿ ಭಾಗವಹಿಸಿದ್ದ ಸ್ಥಳೀಯ ಮೀನುಗಾರರು ತಮ್ಮ ಶಕ್ತಿ ಪ್ರದರ್ಶನ ನಡೆಸಿದವು. ರೋಚಕವಾಗಿದ್ದ ಸ್ಪರ್ಧೆಯನ್ನು ನೋಡುವುದಕ್ಕೆ ವಿದ್ಯಾರ್ಥಿಗಳು, ಸ್ಥಳೀಯರು ನೆರೆದಿದ್ದರು.

ಒಟ್ಟಿನಲ್ಲಿ ಅಂತರಾಷ್ಟ್ರೀಯ ಕಡಲತೀರದ ಸ್ವಚ್ಛತಾ ದಿನದ ಅಂಗವಾಗಿ ಮೀನುಗಾರರ ಸಹಭಾಗಿತ್ವದೊಂದಿಗೆ ಕಡಲತೀರ ಸ್ವಚ್ಛತೆ ಜೊತೆಗೆ ವಿವಿಧ ಕ್ರೀಡಾಸ್ಪರ್ಧೆಗಳು ಜನರ ಮೆಚ್ಚುಗೆಗೆ ಪಾತ್ರವಾಯಿತು. ಮಾತ್ರವಲ್ಲದೆ ಕಡಲತೀರ ಕೂಡ ಪ್ಲಾಸ್ಟಿಕ್ ನಿಂದ ಮುಕ್ತಗೊಂಡಿದ್ದು ಸಮುದ್ರದಲ್ಲಿ ಕಸ ಎಸೆಯುವವರಲ್ಲಿ ಜಾಗೃತಿ ಮೂಡಿಸಲಾಯಿತು.

ಇದನ್ನೂ ಓದಿ :ಮೂಡಬಿದಿರೆಯಿಂದ 2700 ಕಿ ಮೀ ದೂರಕ್ಕೆ ಆಂಬ್ಯುಲೆನ್ಸ್​ನಲ್ಲಿ ರೋಗಿಯ ಸ್ಥಳಾಂತರ

ABOUT THE AUTHOR

...view details