ಕರ್ನಾಟಕ

karnataka

ETV Bharat / state

ಬ್ಯಾಂಕ್​ಗೆ ವಂಚಿಸಿ ಹೆಂಡತಿ ಖಾತೆಗೆ 2ಕೋಟಿಗೂ ಹೆಚ್ಚು ಹಣ  ವರ್ಗಾವಣೆ: ನಾಪತ್ತೆಯಾದ ಅಧಿಕಾರಿ!

ಬ್ಯಾಂಕ್ ಆಫ್ ಬರೋಡಾ ಸಹಾಯಕ ವ್ಯವಸ್ಥಾಪಕನೊಬ್ಬ ಬ್ಯಾಂಕ್​ಗೆ ವಂಚನೆ ಮಾಡಿ ಬ್ಯಾಂಕ್​ನಿಂದ ಅಕ್ರಮವಾಗಿ 2.70 ಕೋಟಿ ಹಣ ಪಡೆದು ಕಾಣೆಯಾಗಿದ್ದು, ವಂಚನೆ ಆರೋಪದಡಿ ಆರೋಪಿ ವಿರುದ್ದ ಪ್ರಕರಣ ದಾಖಲಿಸಲಾಗಿದೆ.

kn_kwr_bank
ಪ್ರಕರಣದ ಆರೋಪಿ

By

Published : Sep 12, 2022, 5:13 PM IST

Updated : Sep 12, 2022, 5:48 PM IST

ಕಾರವಾರ: ಯಲ್ಲಾಪುರ ಪಟ್ಟಣದ ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ಕರ್ತವ್ಯ ನಿಭಾಯಿಸುತ್ತಿದ್ದ ಸಹಾಯಕ ವ್ಯವಸ್ಥಾಪಕನೋರ್ವ ಅಕ್ರಮವಾಗಿ ಬ್ಯಾಂಕ್​​ ಖಾತೆಯಿಂದ ತನ್ನ ಹೆಂಡತಿಯ ಖಾತೆಗೆ 2.70 ಕೋಟಿ ರೂ. ಹಣ ವರ್ಗಾವಣೆ ಮಾಡಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.

ಬ್ಯಾಂಕ್ ಆಫ್ ಬರೋಡಾ ಯಲ್ಲಾಪುರ ಶಾಖೆಯಲ್ಲಿ ಸಹಾಯಕ ವ್ಯವಸ್ಥಾಪಕನಾಗಿದ್ದ ಆಂಧ್ರಪ್ರದೇಶದ ಅನಂತಪೂರ್​ ಮೂಲದ ಕುಮಾರ ಬೋನಾಲ ಎಂಬಾತ ಕಳೆದ ಏಪ್ರಿಲ್ 7ರಿಂದ ಸೆಪ್ಟೆಂಬರ್ 5ರ ನಡುವೆ ಅಕ್ರಮವಾಗಿ ಹಣ ವರ್ಗಾವಣೆ ಮಾಡಿಕೊಂಡಿದ್ದಾನೆ. ಬ್ಯಾಂಕ್ ಸಿಬ್ಬಂದಿಯ ಲಾಗಿನ್ ಅನ್ನು ಅವರ ಗಮನಕ್ಕೆ ಬಾರದಂತೆ ಉಪಯೋಗಿಸಿಕೊಂಡು, ಆಂಧ್ರದ ಚಿರಲಾದ ಎಸ್ಬಿಐ ಬ್ಯಾಂಕ್​ನಲ್ಲಿ ಖಾತೆ ಹೊಂದಿರುವ ತಮ್ಮ ಪತ್ನಿ ರೇವತಿ ಗೊರ್ರೆಯ ಖಾತೆಗೆ ಬ್ಯಾಂಕ್​ನಿಂದ ಅಕ್ರಮವಾಗಿ 2.70 ಕೋಟಿ ರೂ. ಹಣ ವರ್ಗಾವಣೆ ಮಾಡಿ ವಂಚನೆ ಮಾಡಿದ್ದಾನೆ.

ಈ ಕುರಿತು ಶಾಖಾ ವ್ಯವಸ್ಥಾಪಕ ವಿಶ್ವೇಶ್ವರ ಭಟ್ ಪೊಲೀಸ್​ ಠಾಣೆಗೆ​ ದೂರು ನೀಡಿದ್ದಾರೆ. ಆದರೆ ಆರೋಪಿ ನಾಪತ್ತೆಯಾಗಿದ್ದಾನೆ. ಇನ್ನು ಪ್ರಕರಣ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್​ ಡಿ ಪನ್ನೇಕರ್ ಮಾಹಿತಿ ನೀಡಿದ್ದಾರೆ.

ಬ್ಯಾಂಕ್ ಆಫ್ ಬರೋಡಾ ಯಲ್ಲಾಪುರ ಶಾಖೆಯಲ್ಲಿ ಕಳೆದ ನಾಲ್ಕೈದು ತಿಂಗಳಿಂದ ಸಹಾಯಕ ವ್ಯವಸ್ಥಾಪಕನಾಗಿದ್ದ ಆಂಧ್ರಪ್ರದೇಶ ಮೂಲದ ಕುಮಾರ ಬೋನಾಲ ಇತರ ಸಿಬ್ಬಂದಿಯ ಲಾಗಿನ್ ಪಡೆದು ಅವರಿಗೆ ಗೊತ್ತಿಲ್ಲದಂತೆ ಅಕ್ರಮವಾಗಿ ಬ್ಯಾಂಕ್ ಖಾತೆಯಿಂದ 2.70 ಕೋಟಿ ರೂ ಹಣ ವರ್ಗಾವಣೆ ಮಾಡಿ ಬ್ಯಾಂಕಿಗೆ ವಂಚನೆ ಮಾಡಿದ್ದಾನೆ.

ಪ್ರಕರಣ ಇತ್ತೀಚಿಗೆ ಬೆಳಕಿಗೆ ಬಂದಿದ್ದು, ಈ ಕುರಿತು ಶಾಖಾ ವ್ಯವಸ್ಥಾಪಕರು ಆರೋಪಿ ವಿರುದ್ದ ಯಲ್ಲಾಪುರ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ಇನ್ನು ಅವರ ಪತ್ನಿ ವಿರುದ್ಧವೂ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಸುಮನ್​ ತಿಳಿಸಿದ್ದಾರೆ.

ಇದನ್ನೂ ಓದಿ:ಸೀರಮ್ ಇನ್‌ಸ್ಟಿಟ್ಯೂಟ್​ಗೆ ವಂಚನೆ ಪ್ರಕರಣ: 5 ರಾಜ್ಯಗಳ ಬ್ಯಾಂಕ್‌ಗಳಿಗೆ ಹಣ ವರ್ಗಾವಣೆ

Last Updated : Sep 12, 2022, 5:48 PM IST

ABOUT THE AUTHOR

...view details