ಶಿರಸಿ :ಅಧಿಕಾರಿಗಳ ಅಜ್ಞಾನದಿಂದಾಗಿ ಪುರಾತನ ಪ್ರಸಿದ್ಧವಾದ, ನೂರಾರು ವರ್ಷಗಳ ಇತಿಹಾಸವುಳ್ಳ ಬನವಾಸಿಯ ಉಮಾಮಧುಕೇಶ್ವರ ದೇವಾಲಯದ ಪ್ರಾಂಗಣದಲ್ಲಿ ಮಳೆಯ ಅಬ್ಬರಕ್ಕೆ ನೀರು ಸೋರುತ್ತಿದ್ದು, ಭಕ್ತರಿಗೆ ಸಮಸ್ಯೆ ಉಂಟಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. ದೇವಾಲಯಕ್ಕೆ ಅದರದ್ದೇ ಆದ ಆಡಳಿತ ಮಂಡಳಿ ಇದ್ದರೂ ಸಹ ಪುರಾತತ್ವ ಇಲಾಖೆಯವರೇ ಪುರಾತನ ಕಟ್ಟಡ ನೋಡಿಕೊಳ್ಳುತ್ತಿದ್ದಾರೆ. ಅಧಿಕಾರಿಗಳು ದೇವಾಲಯದ ಸಂರಕ್ಷಣೆ ಮಾಡಬೇಕಾಗಿದ್ದರೂ ಅವರ ನಿರಾಸಕ್ತಿಯಿಂದಾಗಿ ದೇವಾಲಯ ವರ್ಷದಿಂದ ವರ್ಷಕ್ಕೆ ಮಳೆ ನೀರಿನಿಂದ ಹಾಳಾಗುತ್ತಿದೆ ಎನ್ನಲಾಗ್ತಿದೆ.
ಈ ವರ್ಷ ಮಳೆಯ ಅಬ್ಬರಕ್ಕೆ ದೇವಾಲಯದ ಗರ್ಭಗುಡಿ, ನೃತ್ಯ ಮಂಟಪ, ಭಕ್ತರು ಕುಳಿತುಕೊಳ್ಳುವ ಆಸನಗಳ ಮೇಲೆ ನೀರು ತೊಟ್ಟಿಕ್ಕುತ್ತಿದೆ. ಇದರಿಂದ ಭಕ್ತರಿಗೂ ಕಿರಿಕಿರಿ ಉಂಟಾಗುತ್ತಿದೆ. ಆದರೆ ಇಲಾಖೆಯನ್ನು ಹೊರತುಪಡಿಸಿ ಬೇರೆ ಯಾರೂ ಅಭಿವೃದ್ಧಿ ಮಾಡಲು ಆಗದ ಕಾರಣ ಇಲ್ಲಿ ಅಜ್ಞಾನ ಎದ್ದು ಕಾಣುತ್ತಿದೆ ಎಂಬುದು ಆಡಳಿತ ಮಂಡಳಿಯವರ ಆರೋಪವಾಗಿದೆ.
ಕದಂಬರ ಕಾಲದಲ್ಲಿ ನಿರ್ಮಾಣಗೊಂಡಿರುವ ಈ ದೇವಾಲಯ ಸಂಪೂರ್ಣ ಶಿಲೆಗಳಿಂದಲೇ ನಿರ್ಮಿತವಾಗಿದೆ. ಪ್ರತಿ ಬಾರಿ ಮಳೆಗಾಲದಲ್ಲಿ ದೇವಸ್ಥಾನದಲ್ಲಿ ಮಳೆನೀರು ಸೋರುವ ಸಮಸ್ಯೆ ಉಂಟಾಗುತ್ತಿದೆ. ದೇವಾಲಯದ ಒಳಾಂಗಣದಲ್ಲಿ ಮಳೆನೀರು ಸೋರಿಕೆಯಾಗುತ್ತಿರುವುದು ಐತಿಹಾಸಿಕ ದೇವಾಲಯವನ್ನು ಕೇಂದ್ರೀಯ ಪುರಾತತ್ವ ಇಲಾಖೆ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ ಎಂಬುದರ ದ್ಯೋತಕ.