ಶಿರಸಿ: ಕಳೆದ ತಿಂಗಳು ಪ್ರಧಾನಿ ಮೋದಿ ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿದ್ದ ವಿಷಯವೊಂದು ದಿಢೀದರ್ ಫೇಮಸ್ ಆಗ್ತಿದೆ. ಆ ಒಂದು ಮಾತಿನ ಪ್ರಸ್ತಾಪದಿಂದ ಉತ್ತರ ಕನ್ನಡ ಜಿಲ್ಲೆಯ ಈ ಉತ್ಪನ್ನಕ್ಕೆ ಈಗ ಎಲ್ಲಿಲ್ಲದ ಬೇಡಿಕೆ ಬಂದಿದೆ. ಮನ್ ಕಿ ಬಾತ್‌ನಲ್ಲಿ ಪ್ರಸ್ತಾವಿಸುವ ಮೂಲಕ ಬಾಳೆಕಾಯಿ ಹುಡಿ (ಬಾಕಾಹು) ಕ್ರಾಂತಿಯ ಕಂಪು ಈಗ ಎಲ್ಲೆಡೆ ದೇಶಾದ್ಯಂತ ಪಸರಿಸಿದೆ.
ಆಕಾಶವಾಣಿಯ ಮನ್ ಕಿ ಬಾತ್ ಸರಣಿಯಲ್ಲಿ ಪ್ರಧಾನಿ ಮಾತನಾಡಿ, ಕೊರೊನಾ ಕಾಲಘಟ್ಟದಲ್ಲಿ ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಮಹಿಳೆಯರು ಬಾಕಾಹುವಿನಿಂದಾಗಿ ಆದಾಯ ಹೆಚ್ಚಿಸಿಕೊಂಡು ಸ್ವಾವಲಂಬಿ ಜೀವನಕ್ಕೆ ಹೊಸ ದಾರಿ ಕಂಡುಕೊಂಡಿರೋ ಬಗ್ಗೆ ಮೆಚ್ಚುಗೆ ಸೂಚಿಸಿದ್ದರು.
ಬಾಕಾಹು ಎಂದರೇನು?
ಈ ಬಾಕಾಹು ಅಂದರೆ ಬಾಳೆಕಾಯಿ ಹುಡಿ ಎಂದರ್ಥ. ಈ ಹುಡಿ ವಿವಿಧ ಖಾದ್ಯ ರೂಪದಲ್ಲಿ ಅಡುಗೆ ಮನೆ ಪ್ರವೇಶಿಸಿದ್ದು, ಆರೋಗ್ಯ ಮತ್ತು ಆದಾಯದ ದೃಷ್ಟಿಯಿಂದ ಜನಮನ್ನಣೆ ಪಡೆಯುತಿದೆ. ಜೊತೆಗೆ ಕಿರು ಉದ್ಯಮ ಸ್ವರೂಪ ಪಡೆಯುತ್ತಿದೆ. ಗೋಧಿ, ಮೈದಾಕ್ಕೆ ಪರ್ಯಾಯವಾಗಿ ಹಲವು ವಿಟಮಿನ್, ಮೆಗ್ನಿಷಿಯಂ, ಪೊಟಾಶಿಯಂನಂತಹ ಸತ್ವಭರಿತ ಪೋಷಕಾಂಶಗಳಿಂದ ಕೂಡಿದ ಬಾಕಾಹುವನ್ನು ಗೋಧಿ ಪುಡಿ ಮತ್ತು ಮೈದಾ ಹಿಟ್ಟಿಗೆ ಪರ್ಯಾಯವಾಗಿ ಬಳಸಬಹುದಾಗಿದೆ.