ಕಾರವಾರ: ದೇಶ ಮಾತ್ರವಲ್ಲದೆ ವಿದೇಶಗಳು ನಿಬ್ಬೆರಗಾಗುವಂತೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿ 2019ರ ಲೋಕಸಭಾ ಚುನಾವಣೆಯಲ್ಲಿ ದಿಗ್ವಿಜಯ ಸಾಧಿಸಿದೆ. ಈ ಹಿನ್ನೆಲೆಯಲ್ಲಿ ನಾಳೆ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ನಾಳೆ ಇಡೀ ದಿನ ಮೋದಿ ಅಭಿಮಾನಿಯೊಬ್ಬರು ಉಚಿತ ಆಟೋ ಸೇವೆ ನೀಡಲು ನಿರ್ಧರಿಸಿದ್ದಾರೆ.
ಉತ್ತರಕನ್ನಡ ಜಿಲ್ಲೆಯ ಭಟ್ಕಳದ ಹನುಮಾನ್ ನಗರದ ಚಂದ್ರು ನಾಯ್ಕ, ಇಂತಹ ವಿಶಿಷ್ಟ ರೀತಿಯ ಅಭಿಮಾನ ತೋರಲು ಮುಂದಾಗಿದ್ದಾರೆ. ನರೇಂದ್ರ ಮೋದಿ ಆಡಳಿತ, ಜನಪರ ಕಾಳಜಿ ಹಾಗೂ ದೇಶ ಮುನ್ನಡೆಸುವ ರೀತಿಯಿಂದ ಅಪ್ಪಟ ಅಭಿಮಾನಿಯಾಗಿರುವ ಇವರು, ಮೋದಿಯವರು ಪ್ರಮಾಣವಚನ ಸ್ವೀಕರಿಸುವ ದಿನ ಬೆಳಗ್ಗೆ 8ರಿಂದ ಸಂಜೆ 6ರವರೆಗೆ 7 ಕಿಮೀ ವ್ಯಾಪ್ತಿಯಲ್ಲಿ ತಮ್ಮ ಆಟೋದಲ್ಲಿ ಉಚಿತ ಪ್ರಯಾಣವನ್ನು ಘೋಷಣೆ ಮಾಡಿದ್ದಾರೆ. ಅಲ್ಲದೆ ಈ ಕುರಿತು ತಮ್ಮ ಆಟೋದ ಮೇಲೆ ಪತ್ರವನ್ನು ಅಂಟಿಸಿ ಪ್ರಯೋಜನ ಪಡೆಯುವಂತೆ ವಿನಂತಿಸಿದ್ದಾರೆ.