ಕಾರವಾರ: ಕಳೆದ ಕೆಲ ದಿನಗಳಿಂದ ಪ್ರವಾಸೋದ್ಯಮ ಹಾಗೂ ಧಾರ್ಮಿಕ ಕ್ಷೇತ್ರಗಳಿಗೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ. ಅದರಲ್ಲಿಯೂ ಪ್ರವಾಸಿಗರ ಪಾಲಿಗೆ ಸ್ವರ್ಗದಂತಿರುವ ಉತ್ತರಕನ್ನಡ ಜಿಲ್ಲೆಗೆ ಪ್ರವಾಸಿಗರ ದಂಡೆ ಹರಿದುಬರುತ್ತಿದೆ. ಆದರೆ ಹೀಗೆ ಬಂದವರು ಸೇರಿದಂತೆ ಸ್ಥಳೀಯವಾಗಿ ಓಡಾಟ ನಡೆಸುವ ಮಹಿಳೆಯರು ಇದೀಗ ಫ್ರೀ ಬಸ್ಗಾಗಿ ಕಾದು ತೆರಳುತ್ತಿರುವುದರಿಂದ ಜಿಲ್ಲೆಯಲ್ಲಿ ಆಟೋಗಳಿಗೆ ಬೇಡಿಕೆ ಕುಸಿಯುತ್ತಿದೆ. ಇದೇ ಕಾರಣಕ್ಕೆ ಇದೀಗ ಆಟೋ ಚಾಲಕರು ತಮಗೂ ಸಹಾಯ ಧನ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ.
ಹೌದು ಇದೀಗ ಬಹುತೇಕ ಮಹಿಳೆಯರು ಬಸ್ಗಾಗಿ ಕಾದು ತೆರಳುತ್ತಿದ್ದಾರೆ. ಅಷ್ಟೇ ಅಲ್ಲ ಬಸ್ ತುಂಬಿ ತುಳುಕುತ್ತಿರುತ್ತವೆ. ಆದರೆ ಪ್ರಯಾಣಿಕರನ್ನೇ ನಂಬಿ ಬದುಕು ಕಟ್ಟಿಕೊಂಡಿದ್ದ ಆಟೋ ಚಾಲಕರಿಗೆ ದೊಡ್ಡ ಹೊಡೆತ ಬೀಳತೊಡಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಮಾರು 8,500 ಆಟೋಗಳಿದ್ದು, ನಗರ ಪ್ರದೇಶ, ಪ್ರವಾಸೋದ್ಯಮ ಹಾಗೂ ಧಾರ್ಮಿಕ ಕ್ಷೇತ್ರಗಳಿಗೆ ಬರುವ ಜನರನ್ನೇ ನಂಬಿ ಬಹುತೇಕ ಆಟೋ ಚಾಲಕರು ಜೀವನ ನಡೆಸುತ್ತಿದ್ದರು. ಆದರೇ ಇದೀಗ ಮಹಿಳೆಯರ ಉಚಿತ ಬಸ್ ಪ್ರಯಾಣದಿಂದಾಗಿ ನಗರ ಪ್ರದೇಶದ ಮಹಿಳೆಯರು ನಗರ ಸಾರಿಗೆ ಅವಲಂಬಿಸಿದರೇ, ಪ್ರವಾಸ ಹಾಗೂ ಧಾರ್ಮಿಕ ಕ್ಷೇತ್ರಗಳಿಗೆ ಬರುವವರು ಸಹ ಸರ್ಕಾರಿ ಬಸ್ನತ್ತ ಮುಖ ಮಾಡಿದ್ದಾರೆ.
ಜಿಲ್ಲೆಯಲ್ಲಿ ಖಾಸಗಿ ಬಸ್ಗಳ ಸಂಖ್ಯೆ ಕಡಿಮೆ ಇದೆ. ಆದರೆ ಜಿಲ್ಲೆಯಲ್ಲಿ ಆಟೋಗಳು, ಟೆಂಪೋಗಳು ಪ್ರಯಾಣಿಕರಿಗೆ ಸಂಚಾರ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಹೀಗಾಗಿ ಇವುಗಳನ್ನು ನಂಬಿದ ಆಟೋ ಚಾಲಕರು ಇದೀಗ ತಮ್ಮ ವೃತ್ತಿಯನ್ನೇ ಬದಲಿಸುವ ಸ್ಥಿತಿಗೆ ಬಂದಿದ್ದು, ಜಿಲ್ಲೆಯ ಬಹುತೇಕ ಆಟೋ ನಿಲ್ದಾಣದಲ್ಲಿ ಪ್ರಯಾಣಿಕರ ಕೊರತೆಯಿಂದ ದಿನದ ಕೂಲಿ ಸಹ ದುಡಿಯದ ಸ್ಥಿತಿಗೆ ಆಟೋಚಾಲರು ಬಂದು ನಿಂತಿದ್ದಾರೆ. ಆದ್ದರಿಂದ ಸರ್ಕಾರ ಆಟೋ ಚಾಲಕರಿಗೆ ಪ್ರತಿ ತಿಂಗಳು 10 ಸಾವಿರ ಸಹಾಯದನ ಹಾಕಲು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಆಟೋ ಚಾಲಕರ ಸಂಘದ ಅಧ್ಯಕ್ಷ ಶಿವರಾಜ ಮೇಸ್ತಾ ಆಗ್ರಹಿಸಿದ್ದಾರೆ.
ಇನ್ನು ಆಟೋ ಹಾಗೂ ಟೆಂಪೋ ಚಾಲಕರು ಪ್ರಯಾಣಿಕರಿಲ್ಲದೇ ಸಾಕಷ್ಟು ನಷ್ಟ ಅನುಭವಿಸುತ್ತಿದ್ದಾರೆ. ಅಲ್ಲದೇ ಆಟೋದವರು ಕೇವಲ 7 ಕಿ.ಮೀ ವ್ಯಾಪ್ತಿಯಲ್ಲಿ ಮಾತ್ರ ಆಟೋ ಓಡಿಸಬೇಕೆಂಬ ನಿಯಮ ಇದೆ. ಇದನ್ನು ಬದಲಿಸಿ 50 ಕಿ.ಮೀ ವ್ಯಾಪ್ತಿಯಲ್ಲಿ ಓಡಾಟಕ್ಕೆ ಅವಕಾಶ ನೀಡಬೇಕು. ಜೊತೆಗೆ ಆಟೋ ಚಾಲಕರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಇಲ್ಲವಾದರೇ ಆರನೇ ಗ್ಯಾರಂಟಿಯಾಗಿ ಆಟೋ ಚಾಲಕರಿಗೆ ವಿಷದ ಬಾಟಲಿ ನೀಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಓದಿ:ಮಕ್ಕಳ ಜೀವದ ಜೊತೆ ಚೆಲ್ಲಾಟ: ಆಟೋ ಚಾಲಕರ ವಿರುದ್ಧ ಖಡಕ್ ಕ್ರಮಕ್ಕೆ ಮುಂದಾದ ಹು-ಧಾ ಪೊಲೀಸರು