ಶಿರಸಿ:ಶಾಲಾಭಿವೃದ್ಧಿ ಸಮಿತಿಯ ಸದಸ್ಯನೊಬ್ಬ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಶಿರಸಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಶಾಲಾಭಿವೃದ್ಧಿ ಸದಸ್ಯ ನಾರಾಯಣ ಬಾಳು ನೆಸರಕರ ಎಂಬಾತ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದವನಾಗಿದ್ದಾನೆ ಎಂದು ಆರೋಪಿಸಲಾಗಿದೆ. ಜ. 19ರಂದು ವಿದ್ಯಾರ್ಥಿನಿಯ ತಂದೆ-ತಾಯಿ ಹೊಲದ ಕೆಲಸಕ್ಕೆ ಹೋದ ಸಂದರ್ಭ ಮನೆಗೆ ಆಗಮಿಸಿ ಮನೆಯಲ್ಲಿದ್ದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದಾಗ ವಿದ್ಯಾರ್ಥಿನಿ ಜೋರಾಗಿ ಕೂಗಿಕೊಂಡಿದ್ದಾಳೆ. ಆಗ ಅವಳ ಬಾಯಿಯನ್ನು ಮುಚ್ಚಿ ತನ್ನ ಮೊಬೈಲ್ನಲ್ಲಿ ಫೋಟೋ ತೆಗೆದುಕೊಂಡು ನೀನು ಯಾರಿಗಾದರೂ ಈ ವಿಷಯ ತಿಳಿಸಿದರೆ ಈ ಫೋಟೋ ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.
ನಂತರ ಶಾಲೆಯ ಶಿಕ್ಷಕರೋರ್ವರಿಗೆ ಫೋನ್ ಮಾಡಿ ನಿಮ್ಮ ಶಾಲೆಯ ವಿದ್ಯಾರ್ಥಿನಿಯೋರ್ವಳ ಬಗ್ಗೆ ಏನೋ ಹೇಳುವುದಿದೆ ಎನ್ನುತ್ತ ಫೋನ್ ಕಟ್ ಮಾಡಿದ್ದಾನಂತೆ. ನಂತರ ಜನವರಿ 21ರಂದು ನಾರಾಯಣ ಮತ್ತೆ ಶಾಲೆಯ ಬಳಿ ಬಂದು ಶಿಕ್ಷಕರ ಹತ್ತಿರ ಏನೋ ಮಾತನಾಡಿ ಹೋಗಿದ್ದಾನೆ ಎಂದು ಹೇಳಲಾಗಿದ್ದು, ಇದನ್ನೆಲ್ಲ ಗಮನಿಸಿದ ವಿದ್ಯಾರ್ಥಿನಿ ಗಾಬರಿಗೊಂಡು ಮನೆಗೆ ಹೋಗಿ ಸುಮ್ಮನಾಗಿದ್ದಳಂತೆ.
ಎರಡ್ಮೂರು ದಿನಗಳಿಂದ ಮಗಳ ನಡವಳಿಕೆಯಲ್ಲಾದ ಬದಲಾವಣೆ ಗಮನಿಸಿದ ತಾಯಿ ಮಗಳನ್ನು ಸೂಕ್ಷ್ಮವಾಗಿ ವಿಚಾರಿಸಿದಾಗ ನಡೆದ ಘಟನೆಯ ಕುರಿತು ಹೇಳಿಕೊಂಡಿದ್ದಾಳೆ. ನಂತರ ವಿದ್ಯಾರ್ಥಿನಿಯ ತಾಯಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.ಇತ್ತ ನಡೆದ ಘಟನೆ ಬಹಿರಂಗಗೊಳ್ಳುತ್ತಿದ್ದಂತೆ ಆರೋಪಿ ನಾರಾಯಣ ಬಾಳು ನೆಸರಕರ ಎರಡು ದಿನಗಳಿಂದ ನಾಪತ್ತೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.