ಪೊಲೀಸರ ಮೇಲೆ ಹಲ್ಲೆ 10 ಜನರ ಬಂಧನ ಕಾರವಾರ (ಉತ್ತರ ಕನ್ನಡ): ಕರ್ತವ್ಯದಲ್ಲಿದ್ದ ಇಬ್ಬರು ಪೊಲೀಸರ ಮೇಲೆ ಯುವಕರ ಗುಂಪೊಂದು ಹಲ್ಲೆ ಮಾಡಿರುವ ಘಟನೆ ಶನಿವಾರ ತಡರಾತ್ರಿ ನಗರದಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಮಂದಿ ಆರೋಪಿಗಳನ್ನು ಬಂಧಿಸಿದ್ದು, ಇನ್ನೊಬ್ಬ ಆರೋಪಿಯ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.
ಶನಿವಾರ ರಾತ್ರಿ ಕಾರವಾರ ನಗರದ ಬೈತಖೋಲ್ನಲ್ಲಿ ಬೀಟ್ ಕರ್ತವ್ಯದಲ್ಲಿದ್ದ ನಗರ ಠಾಣೆಯ ಕಾನ್ಸ್ಟೇಬಲ್ಗಳಾದ ಗಣೇಶ್ ಕುರಿಯವರ ಹಾಗೂ ಹರೀಶ್ ಗವಾಣಿಕರ ಎಂಬುವರ ಮೇಲೆ ಹಲ್ಲೆ ನಡೆದಿದೆ. ಬೈತಖೋಲ್ ಭೂದೇವಿ ದೇವಸ್ಥಾನದ ಬಳಿ ಮಧ್ಯರಾತ್ರಿ 1.30ರ ವೇಳೆಗೆ ಗುಂಪು ಕಟ್ಟಿಕೊಂಡು ಕುಳಿತಿದ್ದ ತಂಡಕ್ಕೆ ಮನೆಗೆ ತೆರಳುವಂತೆ ಪೊಲೀಸರು ಸೂಚಿಸಿದ್ದಾರೆ. ಇದನ್ನೇ ನೆಪ ಮಾಡಿಕೊಂಡ ಆರೋಪಿಗಳು ಪೊಲೀಸ್ ಸಿಬ್ಬಂದಿ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದರು.
ಈಗಾಗಲೇ 10 ಮಂದಿ ಆರೋಪಿಗಳನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ. ಬಂಧಿತ ಆರೋಪಿಗಳಾದ ಬೈತಖೋಲ್ ನಿವಾಸಿ ಸುನೀಲ ಗೌಡ, ಮಂಜುನಾಥ ಗೌಡ, ಸಂದೇಶ್, ರಘುವೀರ, ನಿತಿನ್ ಗೌಡ, ಗಗನ ಗೌಡ, ಅನುರಾಗ ಗೌಡ, ಉಮೇಶ್ ಜನಕಪ್ರಸಾದ್, ವಿತೇಶ ಗೌಡ, ಯುವರಾಜ ಗೌಡ, ಸುಚಿತ ಗೌಡ ಎಂಬುವರ ವಿರುದ್ಧ ಕಾರವಾರ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಅಂಬ್ಯುಲೆನ್ಸ್ನಲ್ಲಿ ಸ್ನೇಹಿತರ ಜಾಲಿಟ್ರಿಪ್, ದಂಡ ವಿಧಿಸಿದ ಪೊಲೀಸರು;ಸಾರ್ವಜನಿಕರ ಬಳಕೆಗಾಗಿ ಇರುವ ಆಂಬ್ಯುಲೆನ್ಸ್ ವಾಹನ ತೆಗೆದುಕೊಂಡು ಪ್ರವಾಸಕ್ಕೆ ಹೊರಟಿದ್ದ ಚಾಲಕ ಸೇರಿ ಏಳು ಜನರನ್ನು ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರ ಬಳಿ ಪೊಲೀಸರು ವಶಕ್ಕೆ ಪಡೆದು ದಂಡ ವಿಧಿಸಿರುವ ಘಟನೆ ಇತ್ತೀಚೆಗೆ ನಡೆದಿತ್ತು.
ಅಪಘಾತ ಅಥವಾ ಅನಾರೋಗ್ಯದ ವೇಳೆ ಜನರನ್ನು ತುರ್ತಾಗಿ ಆಸ್ಪತ್ರೆಗೆ ಸಾಗಿಸುವ ಆಂಬ್ಯುಲೆನ್ಸ್ ಅನ್ನು ತೆಗೆದುಕೊಂಡು ಚಾಲಕ ಮತ್ತು ಆತನ ಆರು ಮಂದಿ ಗೆಳೆಯರು ಸೇರಿಕೊಂಡು ಬೆಂಗಳೂರಿನಿಂದ ಧರ್ಮಸ್ಥಳ, ಉಡುಪಿ ದೇವಸ್ಥಾನಕ್ಕೆ ಟ್ರಿಪ್ ಹೊರಟಿದ್ದರು. ಆದರೆ ಕೊಟ್ಟಿಗೆಹಾರ ದಾಟಿ ಆಂಬ್ಯುಲೆನ್ಸ್ ಉಜಿರೆಗೆ ಬರುತ್ತಿದ್ದಂತೆ ವಾಹನ ಸೇರಿ ಏಳು ಜನ ಸ್ನೇಹಿತರನ್ನು ಬೆಳ್ತಂಗಡಿ ಸಂಚಾರಿ ಪೊಲೀಸರು ವಶಕ್ಕೆ ಪಡೆದಿದ್ದರು.
ಪೊಲೀಸ್ ಅಧಿಕಾರಿ ಸೂಚನೆ ಮೇರೆಗೆ ಪೊಲೀಸ್ ಸಿಬ್ಬಂದಿ ಆಂಬ್ಯುಲೆನ್ಸ್ ಸಹಿತ ಏಳು ಸ್ನೇಹಿತರನ್ನು ಠಾಣೆಗೆ ಕರೆದೊಯ್ದಿದ್ದರು. ಏಳು ಜನರನ್ನು ಪೊಲೀಸರು ವಿಚಾರಿಸಿದ ವೇಳೆ ಬೆಂಗಳೂರಿನಿಂದ ಧರ್ಮಸ್ಥಳ, ಉಡುಪಿ ಸೇರಿದಂತೆ ವಿವಿಧ ದೇವಸ್ಥಾನಗಳಿಗೆ ಪ್ರವಾಸಕ್ಕೆ ತೆರಳುತ್ತಿದ್ದೆವು ಎಂದು ಪೊಲೀಸರ ಎದುರು ಒಪ್ಪಿಕೊಂಡಿದ್ದರು. ಚಾಲಕನಿಂದ ಆಂಬ್ಯುಲೆನ್ಸ್ ದುರ್ಬಳಕೆ ಮಾಡಿರುವ ಕುರಿತಾಗಿ ದೂರು ದಾಖಲಿಸಿಕೊಂಡ ಸಂಚಾರಿ ಪೊಲೀಸರು, ಆತನಿಗೆ 4,500 ರೂ. ದಂಡ ವಿಧಿಸಿದ್ದರು.
ದನ್ನೂಓದಿ:ಅಂತಾರಾಜ್ಯ ನಕಲಿ ಉದ್ಯೋಗ ದಂಧೆ ಭೇದಿಸಿದ ಸಿಬಿಐ; ಬೆಂಗಳೂರಿನ ವ್ಯಕ್ತಿ ಸೇರಿದಂತೆ ಮೂವರ ಬಂಧನ