ಕಾರವಾರ: ಕ್ಷುಲ್ಲಕ ಕಾರಣಕ್ಕೆ ಸೈನಿಕರ ತಂದೆ-ತಾಯಿಯ ಮೇಲೆ ಪಕ್ಕದ ಮನೆಯವರೇ ಮಾರಣಾಂತಿ ಹಲ್ಲೆ ನಡೆಸಿ ಬೆದರಿಕೆಯೊಡ್ಡಿದ ಘಟನೆ ಭಟ್ಕಳ ತಾಲೂಕಿನ ಮುರುಡೇಶ್ವರ ಮಾವಳ್ಳಿ-1 ಪಂಚಾಯಿತಿ ವ್ಯಾಪ್ತಿಯ ಹಿರೇದೋಮಿಯಲ್ಲಿ ನಡೆದಿದ್ದು, ತಮಗೆ ರಕ್ಷಣೆ ನೀಡುವಂತೆ ಸೈನಿಕರಿಬ್ಬರ ತಂದೆ -ತಾಯಿ ಅಂಗಲಾಚಿದ್ದಾರೆ.
ಹಲ್ಲೆಗೊಳಗಾದ ಸೈನಿಕರ ತಂದೆ-ತಾಯಿಗಳು ಮುರ್ಡೇಶ್ವರ ಹೀರೆದೋಮಿಯ ಮಂಜುನಾಥ ಶನಿಯಾರ ನಾಯ್ಕ, ಯಮುನಾ ಮಂಜುನಾಥ ನಾಯ್ಕ ಎಂದು ತಿಳಿದು ಬಂದಿದೆ. ಇನ್ನು ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಬಗ್ಗೆ ಹಿರೆದೋಮಿಯ ಶ್ರೀಧರ ತಿಮ್ಮಪ್ಪ ಮೊಗೇರ, ತಿಮ್ಮಪ್ಪ ನಾರಾಯಣ ಮೊಗೇರ, ಮಾದೇವಿ ತಿಮ್ಮಪ್ಪ ಮೊಗೇರ, ನೇತ್ರಾ ಉಮೇಶ ಮೊಗೇರ ಎಂಬುವವರ ಮೇಲೆ ದೂರು ದಾಖಲಾಗಿದೆ.
ಎರಡು ಕುಟುಂಬಗಳು ಅಕ್ಕಪಕ್ಕದಲ್ಲಿ ವಾಸವಾಗಿದ್ದು, ಪಂಚಾಯ್ತಿಯಿಂದ ನೀಡಿದ ಕುಡಿಯುವ ನೀರಿನ ಪೈಪ್‌ಲೈನ್ ಹಾಗೂ ದನಕರು ಓಡಾಡುವ ವಿಚಾರವಾಗಿ ಇಬ್ಬರ ನಡುವೆ ಮನಸ್ಥಾಪವಿತ್ತು. ಅಲ್ಲದೆ ಈ ನಡುವೆ ಪಕ್ಕದ ಮನೆಯವರು ಸೈನಿಕರ ಮನೆಗೆ ನೀಡಿದ ಪೈಪ್‌ಲೈನ್ ಆಗಾಗ ಕಟ್ ಮಾಡುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ಮಂಜುನಾಥ ನಾಯ್ಕ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ದೂರು ನೀಡಿದ್ದರು. ಪೈಪ್‌ಲೈನ್ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಮಾವಳ್ಳಿ ಪಂಚಾಯಿತಿ ಪಿಡಿಒ ಅವರಿಗೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೂಚಿಸಿದ್ದರು. ಅದರಂತೆ ಪಿಡಿಒ ಸ್ಥಳಕ್ಕೆ ತೆರಳಿದಾಗಲೂ ಆರೋಪಿಗಳು ಕ್ಯಾತೆ ತೆಗೆದಿದ್ದರು. ಆದರೆ ಇದನ್ನು ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳುವದು ಅನಿವಾರ್ಯ ಎಂದು ಪಿಡಿಒ ಎಚ್ಚರಿಕೆ ನೀಡಿದ್ದರು.