ವಾರ್‌ಶಿಪ್ ಮ್ಯೂಸಿಯಂ ಸಿಬ್ಬಂದಿ ವಿಜಯ್ ಅವರು ಮಾತನಾಡಿದ್ದಾರೆ ಕಾರವಾರ:ಕಾರವಾರ ನಗರವನ್ನು ಕರ್ನಾಟಕದ ಕಾಶ್ಮೀರ ಎಂದೇ ಕರೆಯಲಾಗುತ್ತದೆ. ಒಂದು ಕಡೆ ಕಡಲ ತೀರ, ಇನ್ನೊಂದು ಕಡೆ ಕಾಳಿ ನದಿ, ಇದರ ನಡುವೆ ಪಶ್ಚಿಮ ಘಟ್ಟಗಳು. ಹೀಗೆ ಇಲ್ಲಿನ ಸುಂದರ ಪ್ರವಾಸಿ ತಾಣಗಳನ್ನು ನೋಡಲು ಪ್ರತಿನಿತ್ಯ ಸಾಕಷ್ಟು ಜನ ದೇಶ, ವಿದೇಶದಿಂದ ಬರುತ್ತಾರೆ. ಇದೀಗ ನೌಕಾದಳದಲ್ಲಿ ನಿವೃತ್ತಿಯಾಗಿರುವ ಯುದ್ಧ ವಿಮಾನವೊಂದು ಕಾರವಾರದ ಪ್ರವಾಸಿ ತಾಣಕ್ಕೆ ಸೇರ್ಪಡೆಯಾಗುವ ಮೂಲಕ ಪ್ರವಾಸಿಗರನ್ನು ಕೈಬೀಸಿ ಕರೆಯಲು ರೆಡಿಯಾಗುತ್ತಿದೆ.
ಕಾರವಾರವನ್ನು ಕರ್ನಾಟಕದ ಕಾಶ್ಮೀರ ಎಂದು ಕವಿ ರವೀಂದ್ರನಾಥ್ ಠಾಗೋರ್ ಬಣ್ಣಿಸಿದ್ದಾರೆ. ಭಾರತೀಯ ನೌಕಾದಳದಲ್ಲಿ ನಿವೃತ್ತಿಯಾಗಿರುವ ಐಎನ್‌ಎಸ್ ಟುಪೊಲೆವ್ ಯುದ್ದ ವಿಮಾನ ಕಾರವಾರಕ್ಕೆ ಆಗಮಿಸಿದ್ದು, ಯುದ್ದ ವಿಮಾನವನ್ನು ವಸ್ತು ಸಂಗ್ರಹಾಲಯ ಮಾಡುವ ಕೆಲಸ ಚುರುಕುಗೊಂಡಿದೆ.
ನಗರದ ವಾರ್‌ಶಿಪ್ ಮ್ಯೂಸಿಯಂ ಪಕ್ಕದಲ್ಲಿ ಯುದ್ದ ವಿಮಾನ ವಸ್ತು ಸಂಗ್ರಹಾಲಯ ತಲೆ ಎತ್ತಲಿದೆ. 2017ರಲ್ಲಿ ತಮಿಳುನಾಡಿನ ಅರಕ್ಕೋಣಂನಲ್ಲಿರುವ ಐಎನ್ಎಸ್ ರಾಜಲಿ ನೌಕಾನೆಲೆಯಲ್ಲಿ 5 ಟುಪೊಲೆವ್ ಯುದ್ಧ ವಿಮಾನಗಳನ್ನು ನಿವೃತ್ತಿಗೊಳಿಸಲಾಗಿತ್ತು. ಅವುಗಳಲ್ಲಿ ಒಂದನ್ನು ಕಾರವಾರದಲ್ಲಿ ಮ್ಯೂಸಿಯಂ ಆಗಿ ಇರಿಸಲು ನೌಕಾನೆಲೆಯೊಂದಿಗೆ ಜಿಲ್ಲಾಡಳಿತ ಒಪ್ಪಂದ ಮಾಡಿಕೊಂಡಿತ್ತು. ಆದರೆ ತಾಂತ್ರಿಕ ಕಾರಣಗಳಿಂದಾಗಿ ಯುದ್ಧ ವಿಮಾನವನ್ನು ಕಾರವಾರಕ್ಕೆ ತರುವುದು ವಿಳಂಬವಾಗಿತ್ತು.
ಟುಪೊಲೆವ್ ಯುದ್ದ ವಿಮಾನವನ್ನು ಕಾರವಾರಕ್ಕೆ ತರಲು ಇದ್ದ ಸಮಸ್ಯೆಗಳನ್ನು ನಿವಾರಿಸಿ ಬಿಡಿ ಭಾಗಗಳಾಗಿ ಬೇರ್ಪಡಿಸಿ ತಂದು ಕಾರವಾರದಲ್ಲಿ ಜೋಡಿಸಲು ಟೆಂಡರ್ ಕರೆಯಲಾಗಿತ್ತು. ಅದರಂತೆ ಕಾರವಾರಕ್ಕೆ ಲಾರಿಗಳಲ್ಲಿ ಹೊತ್ತು ಟುಪೊಲೆವ್ ಯುದ್ದ ವಿಮಾನವನ್ನ ತಂದು ವಸ್ತು ಸಂಗ್ರಹಾಲಯ ಮಾಡುವ ಕಾರ್ಯ ನಡೆದಿದೆ.
ಜನರಿಗೆ ಹಾಗೂ ಪುಟ್ಟ ಮಕ್ಕಳಿಗೆ ಯುದ್ದ ವಿಮಾನದ ಬಗ್ಗೆ ಕುತೂಹಲ ಹೆಚ್ಚಾಗಿದೆ. ಇದರಿಂದ ನಿತ್ಯವೂ ಕರೆ ಮಾಡಿ ಉದ್ಘಾಟನೆ ಯಾವಾಗ? ಎಂದೂ ಕೇಳುತ್ತಿದ್ದಾರೆ. ಈಗಾಗಲೇ ವಿಮಾನ ಜೋಡಣೆ ನಡೆಯುತ್ತಿದ್ದು, ಇನ್ನೊಂದು ತಿಂಗಳಲ್ಲಿ ಪ್ರವಾಸಿಗರಿಗೆ ಮುಕ್ತವಾಗಲಿದೆ. ರಾಜ್ಯದಲ್ಲಿಯೇ ಯುದ್ದ ವಿಮಾನ ಹಾಗೂ ಹಡಗು ಇರುವ ಏಕೈಕ ಸ್ಥಳ ಇದಾಗಿದ್ದು, ಪ್ರವಾಸಿಗರಿಗೆ ಅನುಕೂಲವಾಗಲಿದೆ ಎನ್ನುತ್ತಾರೆ ವಾರ್ ಶಿಫ್ ಮ್ಯೂಸಿಯಂನ ಸಿಬ್ಬಂದಿ ವಿಜಯ್.
ಈಗಾಗಲೇ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ನಿವೃತ್ತವಾಗಿದ್ದ ಮತ್ತೊಂದು ಟುಪೊಲೆವ್ ಯುದ್ಧ ವಿಮಾನ ವಸ್ತು ಸಂಗ್ರಹಾಲಯವನ್ನು ಸ್ಥಾಪನೆ ಮಾಡಲಾಗಿತ್ತು. ಮೊದಲ ಬಾರಿಗೆ ಮಾಡಿದ ಯುದ್ದ ವಿಮಾನ ವಸ್ತು ಸಂಗ್ರಹಾಲಯ ಪ್ರವಾಸಿಗರ ಆಕರ್ಷಣೆಯ ತಾಣವಾಗಿತ್ತು. ಈ ಹಿನ್ನೆಲೆಯಲ್ಲಿ ಕರ್ನಾಟಕಕ್ಕೂ ಯುದ್ದ ವಿಮಾನ ತಂದು ವಸ್ತು ಸಂಗ್ರಹಾಲಯ ಮಾಡುವ ಪ್ರಯತ್ನ ಕಳೆದ ಐದಾರು ವರ್ಷದಿಂದ ನಡೆದಿದ್ದು, ಅಂತಿಮವಾಗಿ ಕಾರವಾರಕ್ಕೆ ಆಗಮಿಸಿದೆ.
ಟ್ಯಾಗೋರ್ ಕಡಲ ತೀರದಲ್ಲಿ ಈಗಿರುವ ಚಾಪೆಲ್ ಯುದ್ಧ ನೌಕೆ ವಸ್ತು ಸಂಗ್ರಹಾಲಯದ ಜೊತೆಗೆ ಟುಪೊಲೆವ್ ಯುದ್ಧ ನೌಕೆ ಮ್ಯೂಸಿಯಂ ಸಹ ನಿರ್ಮಾಣವಾಗುವುದರಿಂದ ರಾಜ್ಯದಲ್ಲೇ ಪ್ರವಾಸಿಗರ ಆಕರ್ಷಣೆಯ ತಾಣವಾಗಿ ಮಾರ್ಪಾಡಾಗುತ್ತಿದ್ದು, ಪ್ರವಾಸಿಗರು ಸಂತಸ ಪಡುತ್ತಿದ್ದಾರೆ. ಇದರಿಂದ ನೌಕಾಸೇನೆ, ವಾಯು ಸೇನೆ ಸೇರುವವರಿಗೆ ಇದೊಂದು ಸ್ಪೂರ್ತಿದಾಯಕವಾಗಲಿದೆ ಎಂದು ಪ್ರವಾಸಿಗರಾದ ಸುಭಾಷ್ ಚಂದ್ರ ಪಾಟೀಲ್ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಸದ್ಯ ಟುಪೊಲೆವ್ ಯುದ್ದ ವಿಮಾನ ಬಿಡಿ ಭಾಗಗಳನ್ನಾಗಿ ಮಾಡಿ ತಂದಿದ್ದು ಮರು ಜೋಡಣೆ ಮಾಡುವ ಕಾರ್ಯದಲ್ಲಿ ಟೆಂಡರ್ ಪಡೆದವರು ತೊಡಗಿದ್ದಾರೆ. ಒಂದೆರಡು ತಿಂಗಳಲ್ಲಿ ಎಲ್ಲಾ ಕಾರ್ಯಗಳು ಮುಗಿಯುವ ಮೂಲಕ ವರ್ಷಾಂತ್ಯದಲ್ಲಿ ಬರುವ ಪ್ರವಾಸಿಗರಿಗೆ ಟುಪೊಲೆವ್ ಯುದ್ದ ವಿಮಾನ ವಸ್ತು ಸಂಗ್ರಹಾಲಯ ನೋಡುವ ಅವಕಾಶ ಮಾಡಿಕೊಡಬೇಕು ಎನ್ನುವುದು ಜಿಲ್ಲಾಡಳಿತದ ಆಶಯ.
ಇದನ್ನೂ ಓದಿ:ಅದಮ್ಯ ಚೇತನಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ : ಶೂನ್ಯ ತ್ಯಾಜ್ಯ ಅಡುಗೆ ಮನೆ ಕುರಿತು ಶ್ಲಾಘನೆ