ಭಟ್ಕಳ: ತನ್ನ ಕೆಲಸ ಮುಗಿಸಿ ಮನೆಗೆ ಬೈಕ್ನಲ್ಲಿ ಬರುತ್ತಿದ್ದ ಪತ್ರಕರ್ತನ ಮೇಲೆ ಹಿಂದಿನಿಂದ ಮೂರು ಬೈಕ್ಗಳಲ್ಲಿ ಬಂದ ಮುಸುಕುಧಾರಿ ಗೂಂಡಾಗಳು ರಸ್ತೆಗೆ ತಳ್ಳಿ, ಹಲ್ಲೆ ನಡೆಸಿದ ಘಟನೆ ಭಟ್ಕಳದಲ್ಲಿ ನಡೆಯಿತು.
ರಾಘು ಯಾನೆ ಅರ್ಜುನ್ ಮಲ್ಯ (30) ಹಲ್ಲೆಗೊಳಗಾದ ಪತ್ರಕರ್ತ. ದುಷ್ಕರ್ಮಿಗಳು ಮರದ ರೀಪು ಹಾಗು ರಾಡ್ಗಳಿಂದ ಹಲ್ಲೆ ಮಾಡಿದ್ದಾರೆ. ಅರ್ಜುನ್ ಅವರ ಎಡಗೈನ ನಾಲ್ಕು ಕಡೆಗಳಲ್ಲಿ ಮೂಳೆ ಮುರಿತಗೊಂಡಿದೆ. ಅಲ್ಲದೇ ಎಡಗಾಲು ಸಹ ಮುರಿದಿದೆ. ರಾಡ್ನಿಂದ ತಲೆಗೆ ಹಲವು ಬಾರಿ ಹಲ್ಲೆ ಮಾಡಿದ್ದು, ಅರ್ಜುನ್ ಹೆಲ್ಮೆಟ್ ಧರಿಸಿದ್ದರಿಂದ ಯಾವುದೇ ಹಾನಿಯಾಗಿಲ್ಲ ಎಂದು ತಿಳಿದು ಬಂದಿದೆ.
ಬೆಳಕೆಯ ನಿವಾಸಿ ಅರ್ಜುನ್ ಯಾನೆ ರಾಘು ಕಳೆದ ಕೆಲವು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡಿದ್ದರು. ಭಟ್ಕಳದ ಪುರಸಭೆ ಕಟ್ಟಡದಲ್ಲಿ ಕಚೇರಿ ಹೊಂದಿರುವ ಅರ್ಜುನ್ 'ಕರಾವಳಿ ಸಮಾಚಾರ್' ಎನ್ನುವ ವೆಬ್ ಪೋರ್ಟಲ್ ಸಂಪಾದಕರಾಗಿದ್ದಾರೆ. ಕೆಲವು ದಿನಗಳ ಹಿಂದೆ ರಿಕ್ರಿಯೇಷನ್ ಕ್ಲಬ್ನಿಂದಾಗುವ ಸಮಸ್ಯೆಗಳ ಬಗ್ಗೆ ನಿಷ್ಪಕ್ಷಪಾತ ವರದಿ ಮಾಡಿದ್ದರು.
ಕಳೆದ ಎರಡು ದಿನಗಳಿಂದ ಕೆಲವು ವ್ಯಕ್ತಿಗಳು ಅರ್ಜುನ್‌ನನ್ನು ಹಿಂಬಾಲಿಸುತ್ತಿರುವುದನ್ನು ಗಮನಿಸಿದ್ದರೂ ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಗುರುವಾರ ಸಂಜೆ ಕೆಲಸ ಮುಗಿಸಿ ಬೈಕ್ನಲ್ಲಿ ವಾಪಸ್ ಆಗುತ್ತಿದ್ದರು. ಮನೆಯಿಂದ ಸುಮಾರು 300 ಮೀಟರ್ ದೂರದಲ್ಲಿ ನಿರ್ಜನ ಪ್ರದೇಶದಲ್ಲಿ ಬರುತ್ತಿದ್ದ ವೇಳೆ, ಹಿಂದಿನಿಂದ ಓವರ್ ಟೇಕ್ ಮಾಡಿ ಬಂದ ಬೈಕ್ಗಳಲ್ಲಿ ಹಿಂದೆ ಕುಳಿತವರ ಪೈಕಿ ಒಬ್ಬ ಬಲವಾಗಿ ಅರ್ಜುನ್ ಅವರ ಬೈಕ್ ಅನ್ನು ತಳ್ಳಿದ್ದಾನೆ.
ನಿಯಂತ್ರಣ ಕಳೆದುಕೊಂಡ ಅರ್ಜುನ್ ಬೈಕ್‌ಸಮೇತ ರಸ್ತೆಗೆ ಬಿದ್ದಿದ್ದಾರೆ. ಆಗ ಆರು ಜನರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಬೊಬ್ಬೆ ಕೇಳಿ ಸ್ಥಳೀಯರು ಓಡಿ ಬಂದಾಗ ರಾಡ್, ರೀಪುಗಳನ್ನು ಅಲ್ಲಿಯೇ ಬಿಟ್ಟು ದುಷ್ಕರ್ಮಿಗಳು ಬೈಕ್ನಲ್ಲಿ ಪರಾರಿಯಾಗಿದ್ದಾರೆ.
ಹಲ್ಲೆಗೊಳಗಾದ ಅರ್ಜುನ್ ಅವರನ್ನು ಸ್ಥಳೀಯರು ಭಟ್ಕಳದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಬಳಿಕ ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎಲುಬು ಮತ್ತು ಮೂಳೆ ತಜ್ಞ ದಿನೇಶ್ ಕುಮಾರ್ ಶುಕ್ರವಾರ ಶಸ್ತ್ರಚಿಕಿತ್ಸೆ ನಡೆಸುವುದಾಗಿ ತಿಳಿಸಿದ್ದಾರೆ. ಭಟ್ಕಳ ಗ್ರಾಮೀಣ ಠಾಣೆ ಎಸ್ಐ ಭರತ್ ಹಾಗು ಸಿಬ್ಬಂದಿ ಮಲ್ಲಿಕಾರ್ಜುನ್ ನಾಯ್ಕ್ ಆಸ್ಪತ್ರೆಗೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪತ್ರಕರ್ತರಿಂದ ಖಂಡನೆ:ಅರ್ಜುನ್ ಮಲ್ಯ ಅವರ ಮೇಲಿನ ಹಲ್ಲೆಯನ್ನು ಭಟ್ಕಳ, ಉತ್ತರ ಕನ್ನಡ ಹಾಗು ಕುಂದಾಪುರದ ಪತ್ರಕರ್ತರು ತೀವ್ರವಾಗಿ ಖಂಡಿಸಿದ್ದಾರೆ. ಪತ್ರಕರ್ತರು ತಮ್ಮ ಕರ್ತವ್ಯವನ್ನು ನಿರ್ಭೀತಿಯಿಂದ ಮಾಡಲು ಅವಕಾಶ ಸಿಗಬೇಕು. ಹೀಗೆ ದುಷ್ಕರ್ಮಿಗಳು ಕಾನೂನನ್ನು ಪದೇ ಪದೇ ಕೈಗೆ ತೆಗೆದುಕೊಂಡು ಹಲ್ಲೆ ನಡೆಸಿದರೆ ಪತ್ರಕರ್ತರಿಗೆ ಕರ್ತವ್ಯ ನಿರ್ವಹಿಸಲು ಕಷ್ಟವಾಗುತ್ತದೆ. ಈ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿಗಳು ಗಮನಹರಿಸಿ ಹಲ್ಲೆ ನಡೆಸಿದ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.