ಕಾರವಾರ: ಆಶಾ ಕಾರ್ಯಕರ್ತೆಯರ ಮಾಸಿಕ ಗೌರವಧನ ಹೆಚ್ಚಳ, ಕೊರೊನಾ ಸೋಂಕಿನಿಂದ ರಕ್ಷಣೆ ಪಡೆಯಲು ಸುರಕ್ಷಾ ಸಾಧನಗಳನ್ನು ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ತಕ್ಷಣ ಈಡೇರಿಸುವಂತೆ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಉತ್ತರ ಕನ್ನಡ ಜಿಲ್ಲಾ ಘಟಕವು ಸರ್ಕಾರವನ್ನು ಒತ್ತಾಯಿಸಿದೆ.
ಈ ಬಗ್ಗೆ ಕಾರವಾರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಸಂಘದ ಕಾರವಾರ ತಾಲೂಕು ಘಟಕದ ಅಧ್ಯಕ್ಷೆ ಚೇತನಾ ಮಂಗೇಶ ಕೊಚರೇಕರ್, ರಾಜ್ಯದಾದ್ಯಂತ ಸುಮಾರು 42 ಸಾವಿರ ಆಶಾ ಕಾರ್ಯಕರ್ತೆಯರು ದುಡಿಯುತ್ತಿದ್ದಾರೆ. ಆದರೆ ಸೂಕ್ತ ರಕ್ಷಣೆ ಇಲ್ಲದೆ ಹಾಗೂ ಗೌರವಧನ ಕಡಿಮೆ ಇರುವ ಕಾರಣ ಕಳೆದ ಜನವರಿಯಲ್ಲಿ ರಾಜ್ಯ ಸರ್ಕಾರ ಹಾಗೂ ಸಂಬಂಧಪಟ್ಟ ಜನಪ್ರತಿನಿಧಿಗಳಲ್ಲಿ ಮನವಿ ಮಾಡಲಾಗಿತ್ತು. ಅಂದು ಬೇಡಿಕೆ ಈಡೇರಿಸುವುದಾಗಿ ಹೇಳಿದ್ದ ಸರ್ಕಾರ ಈವರೆಗೂ ಯಾವುದೇ ಬೇಡಿಕೆ ಈಡೇರಿಸಿಲ್ಲ.
ಬೇಡಿಕೆ ಈಡೇರಿಸುವಂತೆ ಆಶಾ ಕಾರ್ಯಕರ್ತೆಯರ ಒತ್ತಾಯ ಇದೀಗ ರಾಜ್ಯದಲ್ಲಿಯೂ ಕೊರೊನಾ ಹೆಚ್ಚಾಗಿದ್ದು, ಅದರ ಕೆಲಸವನ್ನು ನಮ್ಮ ಮೇಲೆ ಹೇರಲಾಗುತ್ತಿದೆ. ಕೊಡುವ ಅಲ್ಪ ಗೌರವಧನಕ್ಕೆ ಕೆಲಸ ಮಾಡಲು ಸಾಧ್ಯವಾಗದ ಕಾರಣ, ಕಳೆದ ಜುಲೈ 10 ರಿಂದ ಕೆಲಸವನ್ನು ಸ್ಥಗಿತಗೊಳಿಸಿದ್ದು ಇಂದಿಗೆ 13 ದಿನಗಳು ಕಳೆದಿದೆ. ಯಾವುದೇ ಕಾರಣಕ್ಕೂ ಬೇಡಿಕೆ ಈಡೇರಿಸುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಹೇಳಿದರು.
ಇನ್ನು ಆಶಾ ಕಾರ್ಯಕರ್ತೆಯರು ಪ್ರತಿನಿತ್ಯ ಜೀವದ ಹಂಗು ತೊರೆದು ಕೊರೊನಾ ನಿಯಂತ್ರಣ ಸಂಬಂಧ ಕೆಲಸ ಮಾಡುತ್ತಿದ್ದಾರೆ. ಆದರೆ ಈವರೆಗೂ ಕಾರ್ಯಕರ್ತೆಯರಿಗೆ ಸೋಂಕಿನಿಂದ ರಕ್ಷಣೆ ಪಡೆಯಲು ಸುರಕ್ಷಾ ಸಾಧನಗಳನ್ನು ನೀಡಿಲ್ಲ. ಈಗಾಗಲೇ ಒತ್ತಾಯಿಸಲಾಗಿದೆಯಾದರೂ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ಸರ್ಕಾರ ಕೆಲಸ ಸ್ಥಗಿತಗೊಳಿಸಿರುವ ಆಶಾ ಕಾರ್ಯಕರ್ತೆಯರನ್ನು ಕರೆದು ಚರ್ಚಿಸಿ ಸುರಕ್ಷಾ ಕವಚ ನೀಡಲು ಗಮನ ಹರಿಸಬೇಕು. ಅಲ್ಲದೇ ಆಶಾ ಕಾರ್ಯಕರ್ತೆಯರಿಗೆ ತಿಂಗಳಿಗೆ 12 ಸಾವಿರ ಗೌರವಧನ ನೀಡಬೇಕು ಎಂದು ಒತ್ತಾಯಿಸಿದರು.