ಕರ್ನಾಟಕ

karnataka

By

Published : Oct 31, 2021, 3:34 PM IST

Updated : Oct 31, 2021, 5:06 PM IST

ETV Bharat / state

ಅಪಾಯ ಅರಿಯದೇ ಪ್ರಾಣ ಕಳೆದುಕೊಳ್ಳುವ ಪ್ರವಾಸಿಗರು : ರಕ್ಷಣೆಗೆಂದೇ ಲೈಫ್​​ಗಾರ್ಡ್​ಗಳ ನೇಮಕ

ಜಿಲ್ಲೆಯ ವಿವಿಧ ಭಾಗದ ಕಡಲತೀರಗಳಿಗೆ ಸುಮಾರು 27 ಲೈಫ್‌ಗಾರ್ಡ್​ಗಳನ್ನು ನೇಮಕ ಮಾಡಲಾಗಿದೆ. ಇವರಿಗೆ ತರಬೇತಿಯ ಐದು ದಿನ ದೈನಂದಿನ ವ್ಯಾಯಾಮ, ಓಟ, ಸ್ವಿಮ್ಮಿಂಗ್, ಅಪಾಯಕ್ಕೆ ಸಿಲುಕಿದವರನ್ನು ನೀರಿನಲ್ಲಿ ರಕ್ಷಣೆ ಮಾಡುವ ಬಗ್ಗೆ ಮತ್ತು ರಕ್ಷಣೆ ಮಾಡಿದ ಬಳಿಕ ಪ್ರಾಥಮಿಕ ಚಿಕಿತ್ಸೆ ನೀಡುವ ಬಗ್ಗೆ ತರಬೇತುದಾರರಾದ ರೋಹಿತ್ ಮತ್ತು ತ್ರಿಶೂಲ್ ಎಂಬುವರು ತರಬೇತಿ ನೀಡಿದ್ದಾರೆ..

ರಕ್ಷಣೆಗೆ ಲೈಫ್​​ಗಾರ್ಡ್​ಗಳ ನೇಮಕ
ರಕ್ಷಣೆಗೆ ಲೈಫ್​​ಗಾರ್ಡ್​ಗಳ ನೇಮಕ

ಕಾರವಾರ :ಕೊರೊನಾ ಪ್ರಮಾಣ ಕಡಿಮೆಯಾಗುತ್ತಿದ್ದಂತೆ ಪ್ರವಾಸಿ ಚಟುವಟಿಕೆಗಳು ಗರಿಗೆದರಿವೆ. ಅದರಲ್ಲಿಯೂ ಉತ್ತರಕನ್ನಡ ಜಿಲ್ಲೆಯ ಕರಾವಳಿ ತೀರಗಳಿಗೆ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ.

ಆದರೆ, ಕಡಲತೀರಗಳಲ್ಲಿ ಅಪಾಯ ಅರಿಯದೇ ನೀರಿಗೆ ಇಳಿದು ಅದೆಷ್ಟೋ ಮಂದಿ ಜೀವಕ್ಕೆ ಆಪತ್ತು ತಂದುಕೊಳ್ಳುತ್ತಿದ್ದು, ಇಂತಹ ಅವಘಡಗಳನ್ನು ತಡೆಯಲು ಇದೀಗ ಮತ್ತೆ ಲೈಫ್ ಗಾರ್ಡ್‌ಗಳನ್ನು ಮರು ನೇಮಕ‌ ಮಾಡಿಕೊಂಡು ತರಬೇತಿ ನೀಡುವ ಮೂಲಕ ಪ್ರವಾಸಿಗರ ರಕ್ಷಣೆಗೆ ಜಿಲ್ಲಾಡಳಿತ ಮುಂದಾಗಿದೆ.

ಲೈಫ್​​ಗಾರ್ಡ್​ಗಳ ನೇಮಕ

ಪ್ರವಾಸೋದ್ಯಮದಿಂದಲೇ ಸಾಕಷ್ಟು ಹೆಸರುವಾಸಿಯಾಗಿರುವ ಜಿಲ್ಲೆಗೆ ಕೊರೊನಾ ಕಡಿಮೆಯಾದ ಬೆನ್ನಲ್ಲೆ ರಾಜ್ಯ ಹಾಗೂ ಅಂತಾರಾಜ್ಯಗಳಿಂದ ಸಾಕಷ್ಟು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಹೀಗೆ ಬಂದವರು ಕಡಲತೀರಗಳಲ್ಲಿನ ಅಪಾಯದ ಸ್ಥಳಗಳ ಬಗ್ಗೆ ತಿಳಿಯದೇ ನೇರವಾಗಿ ನೀರಿಗೆ ಇಳಿದು ಮಕ್ಕಳು, ಮಹಿಳೆಯರು ಎಂಜಾಯ್ ಮಾಡುತ್ತಾರೆ.

ಆದರೆ, ಅದೆಷ್ಟೋ ಸಂದರ್ಭದಲ್ಲಿ ಅಲೆಗಳಿಗೆ ಸಿಕ್ಕಿ ಪ್ರವಾಸಿಗರು ಅಪಾಯ ತಂದುಕ್ಕೊಳ್ಳುತ್ತಿದ್ದಾರೆ. ಮಾತ್ರವಲ್ಲದೆ ಕಳೆದ ಆರು ತಿಂಗಳಲ್ಲಿ ಐದಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಇದೇ ಕಾರಣಕ್ಕೆ ಈ ಹಿಂದೆ ಜಿಲ್ಲೆಯ ಪ್ರಮುಖ ಕಡಲತೀರಗಳಲ್ಲಿ ನೇಮಕ ಮಾಡಿದ್ದ ಲೈಫ್ ಗಾರ್ಡ್‌ಗಳನ್ನು ಮರು ನೇಮಕ ಮಾಡಬೇಕು ಎಂಬ ಒತ್ತಾಯ ಸಾರ್ವಜನಿಕರಿಂದ ಕೇಳಿ ಬಂದಿತ್ತು.

ಅದರಂತೆ ಈ ಬಗ್ಗೆ ಹೆಚ್ಚಿನ ಮುತುವರ್ಜಿವಹಿಸಿದ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಕೊರೊನಾ ಬಳಿಕ ಕೆಲವೆಡೆ ಸರಿಯಾಗಿ ಸಂಬಳ ಸಿಗದೆ ಕೆಲಸ ಬಿಟ್ಟಿದ್ದ ಲೈಫ್ ಗಾರ್ಡ್‌ಗಳನ್ನು ಮರು ನೇಮಕ ಮಾಡಿದೆ.

ಮಾತ್ರವಲ್ಲದೆ ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಐದು ದಿನ ತರಬೇತಿ ಕೂಡ ನೀಡಲಾಗಿದೆ. ಪ್ರವಾಸಿಗರು ಕೂಡ ಕಡಲತೀರಗಳಲ್ಲಿ ಎಚ್ಚರಿಕೆಯಿಂದ ಇರುವುದರ ಜೊತೆಗೆ ಲೈಫ್ ಗಾರ್ಡ್‌ಗಳ ಸಲಹೆಗಳನ್ನು ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಜಿಲ್ಲೆಯ ವಿವಿಧ ಭಾಗದ ಕಡಲತೀರಗಳಿಗೆ ಸುಮಾರು 27 ಲೈಫ್‌ಗಾರ್ಡ್​ಗಳನ್ನು ನೇಮಕ ಮಾಡಲಾಗಿದೆ. ಇವರಿಗೆ ತರಬೇತಿಯ ಐದು ದಿನ ದೈನಂದಿನ ವ್ಯಾಯಾಮ, ಓಟ, ಸ್ವಿಮ್ಮಿಂಗ್, ಅಪಾಯಕ್ಕೆ ಸಿಲುಕಿದವರನ್ನು ನೀರಿನಲ್ಲಿ ರಕ್ಷಣೆ ಮಾಡುವ ಬಗ್ಗೆ ಮತ್ತು ರಕ್ಷಣೆ ಮಾಡಿದ ಬಳಿಕ ಪ್ರಾಥಮಿಕ ಚಿಕಿತ್ಸೆ ನೀಡುವ ಬಗ್ಗೆ ತರಬೇತುದಾರರಾದ ರೋಹಿತ್ ಮತ್ತು ತ್ರಿಶೂಲ್ ಎಂಬುವರು ತರಬೇತಿ ನೀಡಿದ್ದಾರೆ.

ಮಾತ್ರವಲ್ಲದೆ ತರಬೇತಿ ವೀಕ್ಷಣೆ ನಡೆಸಿದ ಜಿಲ್ಲಾಧಿಕಾರಿ ಕೂಡ ಪ್ರವಾಸಿಗರ ರಕ್ಷಣೆ ಕೈಗೊಳ್ಳುವ ಬಗ್ಗೆ ಲೈಫ್ ಗಾರ್ಡ್‌ಗಳಿಂದ ಅಭಿಪ್ರಾಯ ಕೂಡ ಪಡೆದರು. ಅಲ್ಲದೆ ಲೈಪ್ ಗಾರ್ಡ್‌ಗಳಿಗೆ ಅವಶ್ಯವಿರುವ ಮೂಲ ಸೌಕರ್ಯಗಳನ್ನು ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಲೈಫ್‌ ಗಾರ್ಡ್​ಗಳಿಗೆ ಕಳೆದ ಮೂರು ವರ್ಷಗಳಿಂದ ವೇತನ ಹೆಚ್ಚಳವಾಗಿಲ್ಲ. ಅದು ಅಲ್ಲದೆ ಗುತ್ತಿಗೆದಾರರ ಮೂಲಕ ನೀಡುತ್ತಿರುವುದರಿಂದ ನಮಗೆ ಸಮರ್ಪಕ ಸಂಬಳ ಸಿಗುತ್ತಿಲ್ಲ. ಕೂಡಲೇ ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸಿ ನಮಗೆ ಜಿಲ್ಲಾಡಳಿತವೇ ನೇರವಾಗಿ ವೇತನ ನೀಡುವಂತಾಗಬೇಕು.

ಜೊತೆಗೆ ಲೈಫ್‌ಗಾರ್ಡ್​ಗಳನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದು ಅವರು ಕೂಡ ಸ್ಪಂದನೆ ನೀಡಿದ್ದಾರೆ ಎನ್ನುತ್ತಾರೆ ಲೈಫ್ ಗಾರ್ಡ್‌ ಉದಯ್.

ಜಿಲ್ಲೆಯ ಕಡಲತೀರಗಳತ್ತ ಪ್ರವಾಸಿಗರ ಸಂಖ್ಯೆ ಹರಿದು ಬರುವ ವೇಳೆಗೆ ಜಿಲ್ಲಾಡಳಿತ ಲೈಫ್ ಗಾರ್ಡ್‌ಗಳ ನೇಮಕದ ಮೂಲಕ ಮುಂಜಾಗೃತೆ ವಹಿಸಿರುವುದು ಉತ್ತಮ‌ ಬೆಳವಣಿಗೆ.

Last Updated : Oct 31, 2021, 5:06 PM IST

For All Latest Updates

ABOUT THE AUTHOR

...view details