ಭಟ್ಕಳ: ತಾಲೂಕಿನ ಅಳ್ವೇಕೋಡಿ ಬಂದರ್ ಡ್ರಜ್ಜಿಂಗ್ ಕಾಮಗಾರಿಯನ್ನು ಶೀಘ್ರ ಪ್ರಾರಂಭಿಸುವಂತೆ ಶ್ರೀ ದುರ್ಗಾಪರಮೇಶ್ವರಿ ಟ್ರಾವೆಲ್ ಬೋಟ್ ಹಾಗೂ ತೆಂಗಿನಗುಂಡಿ ಮೀನುಗಾರರ ಒಕ್ಕೂಟದವರು ಶಾಸಕ ಸುನೀಲ್ ನಾಯ್ಕ ಅವರಿಗೆ ಮನವಿ ಮಾಡಿದ್ದಾರೆ.
ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಸುನೀಲ್ ನಾಯ್ಕ, ಈಗಾಗಲೇ ತಾಲೂಕಿನ ಅಳ್ವೇಕೋಡಿ, ತೆಂಗಿನಗುಂಡಿ, ಬಂದರ್ ಬ್ರೇಕ್ ವಾಟರ್ ಕಾಮಗಾರಿಗೆ ಸಂಸದ ಅನಂತಕುಮಾರ ಹೆಗಡೆ ಅವರ ಸಹಕಾರದಿಂದ ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ 86 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿಯು ನಡೆಯುತ್ತಿದೆ. ಕಳೆದ ಬಜೆಟ್ ಅಧಿವೇಶನದಲ್ಲಿ ಅಳ್ವೇಕೋಡಿ ಬಂದರ್ ಡ್ರಜ್ಜಿಂಗ್ ಕಾಮಗಾರಿಗೆ 5 ಕೋಟಿ ರೂಪಾಯಿ ಅನುದಾನವನ್ನು ಮಂಜೂರು ಮಾಡಲಾಗಿದೆ. ಆದರೆ 86 ಕೋಟಿ ರೂಪಾಯಿ ವೆಚ್ಚದಲ್ಲಿ ನಡೆಯುತ್ತಿರುವ ಬ್ರೇಕ್ ವಾಟರ್ ಕಾಮಗಾರಿಯು ಸಂಪೂರ್ಣಗೊಳ್ಳದೆ ಡ್ರಜ್ಜಿಂಗ್ ಕಾಮಗಾರಿ ಪ್ರಾರಂಭಿಸುವುದು ಕಷ್ಟಸಾಧ್ಯವಾಗಿದೆ ಎಂದರು.
ಅಳ್ವೆಕೋಡಿ ಬಂದರ್ ಡ್ರಜ್ಜಿಂಗ್ ಕಾಮಗಾರಿ ಶೀಘ್ರ ಆರಂಭಕ್ಕೆ ಮನವಿ ಬ್ರೇಕ್ ವಾಟರ್ ಕಾಮಗಾರಿಯನ್ನು ನಿಧಾನಗತಿಯಲ್ಲಿ ನಡೆಸುತ್ತಿರುವ ಬಗ್ಗೆ ಶಾಸಕರಲ್ಲಿ ಮೀನುಗಾರರು ದೂರು ನೀಡಿ, ಕಾಮಗಾರಿ ಶೀಘ್ರದಲ್ಲಿ ನಡೆದಲ್ಲಿ ಮೀನುಗಾರರಿಗೆ ಅನೂಕೂಲವಾಗಲಿದೆ ಎಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಡ್ರಜ್ಜಿಂಗ್ ಇಲ್ಲದೇ ಮೀನುಗಾರರು ಸಂಕಷ್ಟ ಅನುಭವಿಸುತ್ತಿದ್ದು, ಮೀನುಗಾರಿಕಾ ಸಚಿವರು ಸ್ಥಳ ಪರಿಶೀಲನೆ ಮಾಡಬೇಕಾಗಿದೆ. ಶೀಘ್ರದಲ್ಲಿ ಈ ಕಾಮಗಾರಿ ಆರಂಭವಾಗಲಿದೆ, ಮೀನುಗಾರಿಕಾ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ ಹಾಗೂ ಸ್ಥಳೀಯ ಮೀನುಗಾರರ ಸಮ್ಮುಖದಲ್ಲಿ ಬ್ರೇಕ್ ವಾಟರ್ ಹಾಗೂ ಡ್ರಜ್ಜಿಂಗ್ ಕಾಮಗಾರಿಯ ಆರಂಭಕ್ಕೆ ಅದರ ಗುತ್ತಿಗೆದಾರರನ್ನು ಕರೆಸಿ ಸಚಿವರಿಂದಲೇ ಗುತ್ತಿಗೆದಾರರಿಗೆ ಕಾಮಗಾರಿಯನ್ನು ವೇಗದಲ್ಲಿ ಮುಗಿಸುವಂತೆ ಸೂಚನೆ ನೀಡಿಸಲಿದ್ದೇವೆ. ಈ ಬಗ್ಗೆ ಸಚಿವರ ಭೇಟಿಗೆ ಸಂಪರ್ಕಿಸಿದ್ದು, ಸೆಪ್ಟೆಂಬರ್ 19ರೊಳಗಾಗಿ ಭೇಟಿ ನೀಡುವ ಸಾಧ್ಯತೆಯ ಬಗ್ಗೆ ಮೀನುಗಾರಿಗೆ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಕಳೆದ ಬಾರಿ ನೀರಿನ ಪ್ರಮಾಣ ಏರಿಕೆಯಾಗಿ ಬೋಟ್‍ಗಳಿಗೆ ಹಾನಿಯಾದ ಭಟ್ಕಳ ಬಂದರ್ನ 74 ಬೋಟ್‍ಗಳಿಗೆ ಪರಿಹಾರ ಮಾಡಿಸಿಕೊಡಲಾಗಿದ್ದು, ಮುಂದೆಯೂ ಸಹ ಬೋಟ್‍ಗಳಿಗೆ ಹಾನಿಯಾದಲ್ಲಿ ನನ್ನನ್ನು ಸಂಪರ್ಕಿಸಿ ಎಂದು ಭರವಸೆ ನೀಡಿದರು.
ಈ ವೇಳೆ, ಬಜೆಟ್ ಅಧಿವೇಶನದಲ್ಲಿ ಅಳ್ವೇಕೋಡಿ ಬಂದರ್ ಡ್ರಜ್ಜಿಂಗ್ ಕಾಮಗಾರಿಗೆ 5 ಕೋಟಿ ರೂಪಾಯಿ ಅನುದಾನವನ್ನು ಮಂಜೂರು ಮಾಡಿಸಿದ ಹಿನ್ನೆಲೆ ಶಾಸಕ ಸುನೀಲ್ ನಾಯ್ಕ ಅವರನ್ನು ಮೀನುಗಾರರ ಒಕ್ಕೂಟದಿಂದ ಸನ್ಮಾನಿಸಲಾಯಿತು.