ಕಾರವಾರ: ಮಳೆಗಾಲದಲ್ಲಿ ನದಿಯ ಪ್ರವಾಹಕ್ಕೆ ಸೇತುವೆ ಕೊಚ್ಚಿ ಹೋದ ಪರಿಣಾಮ ಸಂಕಷ್ಟ ಎದುರಿಸಿದ್ದ ಗ್ರಾಮಸ್ಥರೇ ಎಲ್ಲರೂ ಒಟ್ಟಾಗಿ ಸೇರಿ ಸೇತುವೆ ನಿರ್ಮಿಸಿಕೊಳ್ಳುವ ಮೂಲಕ ಮಾದರಿಯಾದ ಘಟನೆ ಜಿಲ್ಲೆಯ ಅಂಕೋಲಾ ತಾಲೂಕಿನ ಗುಳ್ಳಾಪುರ ಗ್ರಾಮದಲ್ಲಿ ನಡೆದಿದೆ.
ಗುಳ್ಳಾಪುರ-ಡೋಂಗ್ರಿ ಗ್ರಾಮಗಳ ನಡುವೆ ಹರಿಯುವ ಗಂಗಾವಳಿ ನದಿಗೆ ಅಡ್ಡಲಾಗಿ 25 ವರ್ಷದ ಹಿಂದೆ ಸೇತುವೆ ನಿರ್ಮಿಸಲಾಗಿದೆ. ಇದು ಪಕ್ಕದ ಹತ್ತಾರು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುತ್ತಿತ್ತು.
ಅಂಕೋಲಾ, ಯಲ್ಲಾಪುರ ಹಾಗೂ ಶಿರಸಿ ತಾಲೂಕುಗಳಿಗೂ ಈ ಸೇತುವೆ ಸಂಪರ್ಕ ಕೊಂಡಿಯಾಗಿತ್ತು. ಆದರೆ, ಕಳೆದ 2021ರ ಜುಲೈ ತಿಂಗಳಿನಲ್ಲಿ ಸುರಿದ ಧಾರಾಕಾರ ಮಳೆಗೆ ಗಂಗಾವಳಿ ನದಿ ಉಕ್ಕಿ ಹರಿದು ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ನೀರಿನ ರಭಸಕ್ಕೆ ಸೇತುವೆ ಕೊಚ್ಚಿಹೋಗಿತ್ತು.
ದಶಕಗಳ ಬಳಿಕ ಗ್ರಾಮಸ್ಥರು ಮತ್ತೆ ದೋಣಿಗಳಲ್ಲಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದಷ್ಟು ಶೀಘ್ರ ಸೇತುವೆ ನಿರ್ಮಿಸಿ ಕೊಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್‌ಗೆ ಸ್ಥಳೀಯರು ಮನವಿ ಮಾಡಿದ್ದರು.
ಅದರಂತೆ ಸಚಿವರು 20 ಲಕ್ಷ ಅನುದಾನ ನೀಡಿದ್ದರೂ ಕಾಮಗಾರಿ ಗುತ್ತಿಗೆ ನೀಡುವ ಕಾರ್ಯ ಈವರೆಗೂ ಪೂರ್ಣಗೊಳ್ಳದ ಹಿನ್ನೆಲೆ ಸೇತುವೆ ನಿರ್ಮಾಣಕ್ಕೆ ಚಾಲನೆ ಸಿಕ್ಕಿರಲಿಲ್ಲ. ಇದರಿಂದ ಬೇಸತ್ತ ಗ್ರಾಮಸ್ಥರು ತಾವೇ ಒಟ್ಟಾಗಿ ಹಣ ಹೊಂದಿಸಿ ಕೇವಲ 8 ದಿನದಲ್ಲಿ ತಾತ್ಕಾಲಿಕ ಸೇತುವೆ ನಿರ್ಮಿಸಿಕೊಂಡಿದ್ದಾರೆ.
ಓದಿ:ಮೀನು ತುಂಬಿಕೊಂಡು ಹೋಗುತ್ತಿದ್ದ ಟ್ರಕ್ ಪಲ್ಟಿ: ಸ್ಥಳದಲ್ಲೇ ನಾಲ್ವರ ಸಾವು, ಹತ್ತು ಮಂದಿ ಸ್ಥಿತಿ ಗಂಭೀರ