ಕರ್ನಾಟಕ

karnataka

ETV Bharat / state

ಅಂಕೋಲಾ-ಹುಬ್ಬಳ್ಳಿ ರೈಲ್ವೆ ಯೋಜನೆ ತಡೆಗೆ ಸುಳ್ಳು ಮಾಹಿತಿ.. ಶೀಘ್ರದಲ್ಲೇ ಪರಿಶೀಲನಾ ಸಮಿತಿ ಭೇಟಿ - 1999ರ ರೈಲ್ವೆ ಯೋಜನೆ

ಅಂಕೋಲಾ-ಹುಬ್ಬಳ್ಳಿ ರೈಲ್ವೆ ಮಾರ್ಗ ನೆನೆಗುದಿಗೆ ಬಿದ್ದಿದೆ. ಯೋಜನೆ ಜಾರಿಯಿಂದ ಪರಿಸರಕ್ಕೆ ಹಾನಿಯಾಗಲಿದೆ ಎಂದು ಕೆಲ ಪರಿಸರವಾದಿಗಳು ನ್ಯಾಯಾಲಯ ಮೆಟ್ಟಿಲೇರಿದ್ದರಿಂದ ಯೋಜನೆ ಇನ್ನೂ ಜಾರಿಯಾಗಿರಲಿಲ್ಲ. ಆದರೆ, ಈಗ ರೈಲ್ವೆ ಸೇವಾ ಸಮಿತಿ ಆರ್​ಟಿಐ ಅಡಿಯಲ್ಲಿ ಮಾಹಿತಿ ಪಡೆದು ಮತ್ತೆ ಈ ಯೋಜನೆಗೆ ಜೀವ ತುಂಬಿದೆ.

Ankola Hubli Railway Project
ಅಂಕೋಲಾ-ಹುಬ್ಬಳ್ಳಿ ರೈಲ್ವೆ ಯೋಜನೆ

By

Published : Jul 13, 2022, 10:53 PM IST

Updated : Jul 14, 2022, 10:45 AM IST

ಕಾರವಾರ(ಉತ್ತರ ಕನ್ನಡ) : ಅಂಕೋಲಾ-ಹುಬ್ಬಳ್ಳಿ ರೈಲ್ವೆ ಮಾರ್ಗಕ್ಕೆ ಒಂದಿಲ್ಲೊಂದು ಅಡ್ಡಿಗಳು ಎದುರಾಗಿ ಯೋಜನೆ ನೆನೆಗುದಿಗೆ ಬಿದ್ದಿತ್ತು. ಈ ಯೋಜನೆಯಿಂದ ಕರಾವಳಿ ಹಾಗೂ ಘಟ್ಟದ ಮೇಲೆ ವ್ಯಾಪಾರ ವಹಿವಾಟಿಗೆ ಸಾಕಷ್ಟು ಅನುಕೂಲವಿದ್ದರೂ ಪರಿಸರವಾದಿಗಳ ವಿರೋಧದಿಂದ ಹಿನ್ನಡೆ ಉಂಟಾಗಿತ್ತು. ಆದರೆ ಪರಿಸರ ಸೂಕ್ಷ್ಮವಲಯದ ಸುಳ್ಳು ಮಾಹಿತಿ ನೀಡಿ ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗಿದ್ದು, ಈ ಸಂಬಂಧ ಶೀಘ್ರದಲ್ಲೇ ಪರಿಶೀಲನಾ ಸಮಿತಿಯೊಂದು ಭೇಟಿ ನೀಡಲಿದೆ.

ಅಂಕೋಲಾ-ಹುಬ್ಬಳ್ಳಿ ನಡುವಿನ ರೈಲ್ವೆ ಯೋಜನೆ ಸುಮಾರು ನೂರು ವರ್ಷಗಳ ಕನಸ್ಸಿನ ಯೋಜನೆಯಾಗಿದೆ. ಕರಾವಳಿ ಮತ್ತು ಉತ್ತರ ಕರ್ನಾಟಕ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಈ ಯೋಜನೆಗೆ 1999ರಲ್ಲಿ ಅಂದಿನ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಚಾಲನೆ ನೀಡಿದ್ದರು. ಆದರೆ ಯೋಜನೆ ಜಾರಿಯಿಂದ ಪರಿಸರಕ್ಕೆ ಹಾನಿಯಾಗಲಿದೆ ಎಂದು ಕೆಲ ಪರಿಸರವಾದಿಗಳು ನ್ಯಾಯಾಲಯ ಮೆಟ್ಟಿಲೇರಿದ್ದರಿಂದ ಯೋಜನೆ ಇನ್ನೂ ಜಾರಿಯಾಗಿರಲಿಲ್ಲ. ಆದರೆ ಇದೀಗ ಯೋಜನೆಗೆ ಇದ್ದ ಬಹುದೊಡ್ಡ ಅಡ್ಡಿಯೊಂದು ನಿವಾರಣೆಯಾಗುವ ಲಕ್ಷಣಗಳು ಕಂಡುಬಂದಿದ್ದು, ಇದು ರೈಲ್ವೆ ಯೋಜನೆ ಜಾರಿ ಹೋರಾಟಗಾರರಲ್ಲಿ ಸಂತಸ ಮೂಡಿಸಿದೆ.

ಅಂಕೋಲಾ-ಹುಬ್ಬಳ್ಳಿ ರೈಲ್ವೆ ಯೋಜನೆ ಬಗ್ಗೆ ರೈಲ್ವೆ ಸೇವಾ ಸಮಿತಿ ಮಾಹಿತಿ

ಅಂಕೋಲಾ-ಹುಬ್ಬಳ್ಳಿ ಉದ್ದೇಶಿತ ರೈಲುಮಾರ್ಗ ಯೋಜನೆಯನ್ನ ವಿರೋಧಿಸುತ್ತಿರುವ ಪ್ರಾಜೆಕ್ಟ್ ವೃಕ್ಷ ಎನ್‌ಜಿಓ ಪರಿಸರ ಸೂಕ್ಷ್ಮವಲಯ ಉದ್ದೇಶಿತ ಯೋಜನಾ ಪ್ರದೇಶದಿಂದ ಕೇವಲ 10 ಕಿ.ಮೀ ದೂರವಿದೆ. ಇದು ವನ್ಯಜೀವಿಗಳು ಹಾಗೂ ಪರಿಸರದ ನಾಶವಾಗಲು ಕಾರಣವಾಗಲಿದೆ ಎಂದು ನ್ಯಾಯಾಲಯಕ್ಕೆ ತಪ್ಪು ಮಾಹಿತಿ ಒದಗಿಸಿತ್ತು. ಇದರಿಂದ ಯೋಜನೆಗೆ ಹಿನ್ನಡೆಯಾಗಿತ್ತು. ಆದರೆ ರೈಲ್ವೆ ಸೇವಾ ಸಮಿತಿ ಈ ಸಂಬಂಧ ಅರಣ್ಯ ಇಲಾಖೆಯಿಂದ ಆರ್‌ಟಿಐ ಅಡಿಯಲ್ಲಿ ಮಾಹಿತಿ ಪಡೆದಿದೆ. ಅರಣ್ಯ ಇಲಾಖೆ ಒದಗಿಸಿರುವ ಮಾಹಿತಿಯಲ್ಲಿ ಯೋಜನೆ ಸ್ಥಳದಿಂದ ಹುಲಿ ಸಂರಕ್ಷಿತ ವಲಯ 14 ಕಿ.ಮೀ ದೂರವಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ ಎಂದು ರೈಲ್ವೆ ಸೇವಾ ಸಮಿತಿ ಕಾರ್ಯದರ್ಶಿ ರಾಜೀವ್ ಗಾಂವ್ಕರ್ ತಿಳಿಸಿದ್ದಾರೆ.

ಈ ಬಗ್ಗೆ ವರದಿ ಸಮೇತ ರೈಲ್ವೆ ಸೇವಾ ಸಮಿತಿಯಿಂದ ಕೋರ್ಟ್‌ಗೆ ಮನವರಿಕೆ ಮಾಡಲಾಗಿದೆ. ಬಳಿಕ ಸೂಕ್ತ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಕೋರ್ಟ್ ತಿಳಿಸಿದ್ದು, ಶೀಘ್ರದಲ್ಲೇ ಸಮಿತಿಯೊಂದು ಪರಿಶೀಲನೆಗೆ ಆಗಮಿಸುವ ನಿರೀಕ್ಷೆಯಿದೆ ಎಂದು ರೈಲ್ವೆ ಸೇವಾ ಸಮಿತಿ ಆಶಯ ವ್ಯಕ್ತಪಡಿಸಿದೆ.

ಸಂಪರ್ಕ ಸರಳ :ಹುಬ್ಬಳ್ಳಿ ಮತ್ತು ಅಂಕೋಲಾ ನಡುವೆ ರೈಲ್ವೆ ಯೋಜನೆ ಜಾರಿಯಾದರೆ ಕರಾವಳಿ ಮತ್ತು ಘಟ್ಟದ ಮೇಲಿನ ಸಂಪರ್ಕ ಸುಲಭವಾಗಲಿದೆ. ಬಂದರುಗಳಿಗೆ ಹೊರದೇಶ, ಹೊರ ರಾಜ್ಯಗಳಿಂದ ಬರುವ ವಸ್ತುಗಳನ್ನ ಘಟ್ಟದ ಮೇಲಿನ ಪ್ರದೇಶಕ್ಕೆ ತೆಗೆದುಕೊಂಡು ಹೋಗಲು, ಘಟ್ಟದ ಮೇಲಿನ ವಸ್ತುಗಳನ್ನ ಕರಾವಳಿಗೆ ತಂದು ಸಮುದ್ರ ಮಾರ್ಗವಾಗಿ ಬೇರೆ ದೇಶಗಳಿಗೆ ಕಳುಹಿಸಲು ಇದರಿಂದ ಸಹಕಾರಿಯಾಗಲಿದೆ.

ವಿರೋಧದಿಂದ ಈ ಯೋಜನೆ ವಿಳಂಬವಾದ ಪರಿಣಾಮ ಆರಂಭದಲ್ಲಿ ಅಂದಾಜಿಸಲಾಗಿದ್ದ ಮೊತ್ತದ ನಾಲ್ಕುಪಟ್ಟು ವೆಚ್ಚವನ್ನು ಈಗ ವ್ಯಯಿಸಬೇಕಾಗಿದೆ. ಪರಿಸರಕ್ಕೆ ಹೆಚ್ಚಿನ ಹಾನಿಯಾಗದ ರೀತಿಯಲ್ಲಿ ಯೋಜನೆ ನಿರ್ಮಾಣವಾಗಲಿದ್ದು, ವನ್ಯಪ್ರಾಣಿಗಳ ಓಡಾಟಕ್ಕೆ ಅನಾನುಕೂಲತೆಯಾಗದ ರೀತಿಯಲ್ಲಿ ಹಲವೆಡೆ ಸುಮಾರು 28 ಕಿ.ಮೀ ಸುರಂಗಮಾರ್ಗ ರೂಪುಗೊಳ್ಳಲಿದೆ. ಹೀಗಾಗಿ ಕರಾವಳಿ ಭಾಗದ ಅಭಿವೃದ್ಧಿಗೂ ಇದು ಸಹಕಾರಿಯಾಗಲಿದೆ ಎನ್ನುತ್ತಾರೆ ಸ್ಥಳೀಯರು.

ಇದನ್ನೂ ಓದಿ:ಕೇದಾರನಾಥದಿಂದ ವಾಪಸಾಗುತ್ತಿದ್ದಾಗ ಗಂಗಾ ನದಿಗೆ ಬಿದ್ದ ನಾಲ್ವರು ಪ್ರವಾಸಿಗರಿದ್ದ ಕಾರು

Last Updated : Jul 14, 2022, 10:45 AM IST

ABOUT THE AUTHOR

...view details