ಕಾರವಾರ: ಮುಂಬೈನ ಲಾಲ್‌ಭಾಗ್ ಚಾ ರಾಜ ಗಣಪತಿ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ದೇಶದ ಅತಿ ಶ್ರೀಮಂತ ಗಣಪತಿ ಎಂದೇ ಬಿಂಬಿತವಾಗಿರುವ ಈ ಗಣೇಶ, ಎಲ್ಲೆಡೆ ಭಾರಿ ಪ್ರಸಿದ್ಧಿ. ಈ ಲಾಲ್‌ಭಾಗ್ ಚಾ ರಾಜ ಗಣಪತಿಯಷ್ಟು ಶ್ರೀಮಂತನಲ್ಲದಿದ್ದರೂ, ಉತ್ತರ ಕನ್ನಡ ಜಿಲ್ಲೆಯ ಮಟ್ಟಿಗೆ, ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳು ಪ್ರತಿಷ್ಠಾಪಿಸುವ ಗಣೇಶನಿಗಿಂತ ಇಲ್ಲಿನ ಮನೆಯೊಂದರಲ್ಲಿ ಪ್ರತಿಷ್ಠಾಪಿಸಿರುವ ಈ ಗಣಪ ಅತಿ ಶ್ರೀಮಂತನಾಗಿದ್ದಾನೆ.
ಇಂತಹದೊಂದು ಶ್ರೀಮಂತ ಗಣಪತಿ ಪ್ರತಿಷ್ಠಾಪಿಸಿರುವುದು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಪಟ್ಟಣದ ಮಹಾಲೆ ಮನೆ ಕುಟುಂಬದವರು. ಮಹಾಲೆ ಮನೆ ವಿನಾಯಕ ಎಂದೇ ಪ್ರಸಿದ್ಧಿ ಪಡೆದಿರುವ ಈ ಗಣಪ ಇದೀಗ ಚಿನ್ನದ ಕಿರೀಟ, ಚಿನ್ನದ ಗದೆ, ಚಿನ್ನದ ತ್ರಿಶೂಲ ಸೇರಿದಂತೆ ಹತ್ತಾರು ಚಿನ್ನದ ಉಂಗುರಗಳನ್ನು ತೊಟ್ಟು ಸರ್ವಾಲಂಕಾರ ಭೂಷಿತನಾಗಿ ವೀರಾಜಮಾನನಾಗಿ ಭಕ್ತರನ್ನು ಹರಸುತ್ತಿದ್ದಾನೆ.
ಶ್ರೀಮಂತ ಗಣಪ:ಬೇಡಿದ ವರವ ಕರುಣಿಸುತ್ತಾನೆಂಬ ಅಗಾಧ ನಂಬಿಕೆ ಹೊಂದಿರುವ ಭಕ್ತರು ನಿತ್ಯವೂ ಇಲ್ಲಿಗೆ ಬಂದು ತಮ್ಮ ಇಷ್ಟಾರ್ಥಗಳ ಈಡೇರಿಸುವಂತೆ ಹರಕೆ ಹೊತ್ತು ತೆರಳುತ್ತಿದ್ದಾರೆ. ಹೀಗೆ ಹೊತ್ತ ಹರಕೆ ಈಡೇರಿದ ಬಳಿಕ ವಿಶೇಷ ಪೂಜೆಯ ಜೊತೆಗೆ ಚಿನ್ನಾಭರಣಗಳನ್ನು ಸಹ ಚೌತಿಯ ಸಮಯದಲ್ಲಿ ಹರಕೆಯ ರೂಪದಲ್ಲಿ ನೀಡುವುದು ರೂಢಿಯಲ್ಲಿದೆ. ಇದರಿಂದಾಗಿ ಜಿಲ್ಲೆಯಲ್ಲಿಯೇ ಅತಿ ಶ್ರೀಮಂತ ಗಣಪನಾಗಿ ಈ ಮಹಾಲೆ ಮನೆ ವಿನಾಯಕ ಗುರುತಿಸಿಕೊಂಡಿದ್ದಾನೆ ಎನ್ನುತ್ತಾರೆ ಇಲ್ಲಿನ ಸ್ಥಳೀಯರು.