ಕರ್ನಾಟಕ

karnataka

ETV Bharat / state

ಉತ್ತರ ಕನ್ನಡದಲ್ಲಿಲ್ಲ ಸೂಕ್ತ ಆ್ಯಂಬುಲೆನ್ಸ್​​ ವ್ಯವಸ್ಥೆ! - uttara kannada ambulance problem

ಕೊರೊನಾ ಪ್ರಕರಣಗಳು ಹೆಚ್ಚಾಗಿ ದೇಶಮಟ್ಟದಲ್ಲಿಯೇ ಉತ್ತರ ಕನ್ನಡ ಜಿಲ್ಲೆ ಪಾಸಿಟಿವಿಟಿ ರೇಟ್ ಹೆಚ್ಚಿರುವ ಪಟ್ಟಿಯಲ್ಲಿ ಗುರುತಿಸಿಕೊಂಡಿದೆ. ಆದ್ರೆ ಬೇಕಾಗಿರುವ ಸೂಕ್ತ ಆ್ಯಂಬುಲೆನ್ಸ್​​ ವ್ಯವಸ್ಥೆಯೇ ಇಲ್ಲವಾಗಿದೆ. ಇರುವ ಕೆಲವೇ ಆ್ಯಂಬುಲೆನ್ಸ್​ಗಳು ಹಲವು ಕೊರತೆಯಿಂದ ಕೂಡಿವೆ.

ambulance
ಆ್ಯಂಬುಲೆನ್ಸ್

By

Published : May 22, 2021, 12:13 PM IST

ಕಾರವಾರ: ರೋಗಿಗಳು, ತುರ್ತು ಅಪಘಾತಕ್ಕೊಳಗಾದವರ ಪಾಲಿಗೆ ಆಪತ್ಭಾಂಧವ ಅಂದ್ರೆ ಆ್ಯಂಬುಲೆನ್ಸ್​​​ಗಳು. ಸುಸಜ್ಜಿತ ಆ್ಯಂಬುಲೆನ್ಸ್​​ಗಳಿದ್ದರೆ ಮಾತ್ರ ಜೀವವನ್ನು ರಕ್ಷಿಸಲು ಸಾಧ್ಯ. ಆದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತ್ರ ಈ ಕೋವಿಡ್​​ ಕಾಲದಲ್ಲೂ ಆ್ಯಂಬುಲೆನ್ಸ್​​ ಸಮಸ್ಯೆ ಎದುರಾಗಿದೆ. ಆ್ಯಂಬುಲೆನ್ಸ್​​ಗಳಿದ್ದರೂ ಕೂಡ ಅವುಗಳೇ ರೋಗಗ್ರಸ್ಥವಾಗಿದ್ದು, ಸೂಕ್ತ ವೈದ್ಯಕೀಯ ಪರಿಕರಗಳಿಲ್ಲದೇ ರೋಗಿಗಳು ಪರದಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಾತ್ರವಲ್ಲದೇ ಎರಡ್ಮೂರು ಪಟ್ಟು ಹಣ ತೆತ್ತು ಖಾಸಗಿ ಆ್ಯಂಬುಲೆನ್ಸ್​​ಗಳ ಮೊರೆ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ.

ಹೌದು, ರಾಜ್ಯದಲ್ಲಿಯೇ ಅತ್ಯಂತ ದೊಡ್ಡ ಜಿಲ್ಲೆಗಳಲ್ಲಿ ಒಂದಾದ ಉತ್ತರ ಕನ್ನಡ ಜಿಲ್ಲೆಯ ಬಹು ಭಾಗ ಅರಣ್ಯ ಪ್ರದೇಶದಿಂದಲೇ ಕೂಡಿದೆ.‌ ಜಿಲ್ಲೆಯ ಬಹುತೇಕ ರಸ್ತೆಗಳು ಇಕ್ಕಟ್ಟಾಗಿದ್ದು, ತಿರುವು-ಮುರುವಿನಿಂದ ಮತ್ತು ದುರಸ್ತಿಗೆ ತಲುಪಿರುವ ಕಾರಣ ಅಪಘಾತಗಳ ಸಂಖ್ಯೆ ಕೂಡ ಹೆಚ್ಚಾಗಿದೆ. ಅಲ್ಲದೇ ಇದೀಗ ಕೊರೊನಾ ಪ್ರಕರಣಗಳು ಹೆಚ್ಚಾಗಿ ದೇಶಮಟ್ಟದಲ್ಲಿಯೇ ಉತ್ತರ ಕನ್ನಡ ಜಿಲ್ಲೆ ಪಾಸಿಟಿವಿಟಿ ರೇಟ್ ಹೆಚ್ಚಿರುವ ಪಟ್ಟಿಯಲ್ಲಿ ಗುರುತಿಸಿಕೊಂಡಿದೆ.

ಉತ್ತರ ಕನ್ನಡದಲ್ಲಿಲ್ಲ ಸೂಕ್ತ ಆ್ಯಂಬುಲೆನ್ಸ್​​ ವ್ಯವಸ್ಥೆ!

ಪ್ರತಿನಿತ್ಯ ಸಾವಿರದ ಗಡಿಯಲ್ಲಿ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಆದರೆ ಹೀಗೆ ಪತ್ತೆಯಾದ ಸೋಂಕಿತರನ್ನು ಈ ಮೊದಲಿನಂತೆ ಮನೆ ಬಾಗಿಲಿಗೆ ಬಂದು ಆ್ಯಂಬುಲೆನ್ಸ್​​ಗಳ ಮೂಲಕ ಕರೆದುಕೊಂಡು ಹೋಗುತ್ತಿಲ್ಲ.‌ ಗಂಭೀರ ಪರಿಸ್ಥಿತಿ ಇದೆ, ಬೇಗ ಬನ್ನಿ ಅಂದ್ರು ಕೂಡ ಜಿಲ್ಲೆಯಲ್ಲಿ ಆ್ಯಂಬುಲೆನ್ಸ್​​ಗಾಗಿ ಎರಡು ಮೂರು ಗಂಟೆಗಳ ಕಾಲ ಕಾಯಬೇಕಾದ ಪರಿಸ್ಥಿತಿ ಇದೆ. ಜಿಲ್ಲೆಯಲ್ಲಿರುವ 20ಕ್ಕೂ ಹೆಚ್ಚು ಆ್ಯಂಬುಲೆನ್ಸ್​​ಗಳ ಪೈಕಿ ಅದೆಷ್ಟೋ 108 ಆ್ಯಂಬುಲೆನ್ಸ್​​ಗಳು ತುಕ್ಕು ಹಿಡಿದಿದ್ದು, ರಸ್ತೆಯ ಮಧ್ಯದಲ್ಲಿಯೇ ಕೆಟ್ಟು ನಿಂತ ಘಟನೆಗಳು ಕೂಡ ನಡೆದಿವೆ.

ಇದಲ್ಲದೆ ಜಿಲ್ಲೆಯಲ್ಲಿ ಒಂದೇ‌ ಒಂದು ವೆಂಟಿಲೇಟರ್ ಆ್ಯಂಬುಲೆನ್ಸ್​​ಗಳಿಲ್ಲ. ತುರ್ತು ಅಗತ್ಯವಿದ್ದವರಿಗೆ ಈ ಆ್ಯಂಬುಲೆನ್ಸ್​​ ಬೇಕು ಅಂದ್ರೆ ಮಂಗಳೂರು ಇಲ್ಲವೇ ಉಡುಪಿಯಿಂದ ಎರಡ್ಮೂರು ಪಟ್ಟು ಹಣ ತೆತ್ತು ಕರೆಸಿಕೊಳ್ಳಬೇಕಾದ ಸ್ಥಿತಿ ಇದೆ. ಖಾಸಗಿ ಆ್ಯಂಬುಲೆನ್ಸ್​​ಗಳ ದರ, ಸರ್ಕಾರಿ ಸೇವೆಯ ಆ್ಯಂಬುಲೆನ್ಸ್​​ಗಳು ಸಮಯಕ್ಕೆ ಸರಿಯಾಗಿ ಬಾರದೆ ಇರುವುದರಿಂದ ರೋಗಿಗಳು ಪರದಾಡಬೇಕಾದ ಸ್ಥಿತಿ ಎದುರಾಗಿದೆ ಎನ್ನುತ್ತಾರೆ ಸ್ಥಳೀಯರು.

ಜಿಲ್ಲೆಯಲ್ಲಿ ಸುಮಾರು 20ಕ್ಕೂ ಹೆಚ್ಚು ಆ್ಯಂಬುಲೆನ್ಸ್​​ಗಳಿದ್ದು, ಅದರಲ್ಲಿ ಬಹುತೇಕ 108ರ ಆ್ಯಂಬ್ಯುಲೆನ್ಸ್ ವಾಹನಗಳಾಗಿವೆ. ಈ ಆ್ಯಂಬುಲೆನ್ಸ್​​ ಸಿಬ್ಬಂದಿಗೆ ಮೂರು ತಿಂಗಳಿನಿಂದ ಸರಿಯಾದ ಸಂಬಳ ಕೂಡ ನೀಡಿಲ್ಲವಂತೆ. ಕೆಲವೆಡೆ ಪಿಪಿಇ ಕಿಟ್ ಸೇರಿದಂತೆ ಇನ್ನಿತರೆ ಸುರಕ್ಷಾ ಸಾಮಗ್ರಿಗಳು ಇಲ್ಲದೇ ಕೆಲಸ ಮಾಡುವಂತಾಗಿದೆ. ಈ ಬಗ್ಗೆ ಗುತ್ತಿಗೆ ಪಡೆದ ಕಂಪನಿ ಇಲ್ಲವೇ ಅಧಿಕಾರಿಗಳಿಗೆ ತಿಳಿಸಿದರೆ ಕೆಲಸ ಕಳೆದುಕೊಳ್ಳುವ ಆತಂಕ ಇರುವುದರಿಂದ ಎಲ್ಲರು ಪರಿಸ್ಥಿತಿಗೆ ಹೊಂದಿಕೊಂಡು ಕೆಲಸ ನಿರ್ವಹಿಸುತ್ತಿದ್ದೇವೆ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಆ್ಯಂಬುಲೆನ್ಸ್​​ ಚಾಲಕರು.

ಇದನ್ನೂ ಓದಿ:ವಯೋವೃದ್ಧರಿಗೆ ವರವಾದ ಲಸಿಕೆ : ವ್ಯಾಕ್ಸಿನ್​ ಪಡೆದವರಲ್ಲಿ ಸಾವು ಕಡಿಮೆ

ಆದರೆ ಈ ಬಗ್ಗೆ ಅಧಿಕಾರಿಗಳನ್ನು ಕೇಳಿದ್ರೆ, ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಆ್ಯಂಬುಲೆನ್ಸ್​​ ವ್ಯವಸ್ಥೆ ಇದೆ. ಆದರೆ ಹಳೆಯ 108 ಆ್ಯಂಬುಲೆನ್ಸ್​​ಗಳಾಗಿದ್ದು ಸಣ್ಣ-ಪುಟ್ಟ ತೊಂದರೆಗಳಾಗುತ್ತಿದೆ. ಇದೀಗ ಎಲ್ಲ ತಾಲೂಕುಗಳಿಗೂ ಶಾಸಕರ ಅನುದಾನದ ಅಡಿಯಲ್ಲಿ ಸುಸಜ್ಜಿತ ಆ್ಯಂಬುಲೆನ್ಸ್​​ ಖರೀದಿ ಮಾಡುತ್ತಿದ್ದು, ಒಂದು ವಾರದಲ್ಲಿ ಸೇವೆಗೆ ಬರಲಿವೆ. 108 ಆ್ಯಂಬುಲೆನ್ಸ್​​ ವಾಹನದ ಚಾಲಕರ ಕೊರತೆ ಇದೆ. ಅದು ಕಂಪನಿಯೊಂದಕ್ಕೆ ಗುತ್ತಿಗೆ ನೀಡಿದ್ದು, ಅವರಿಗೆ ಸೂಚನೆ ನೀಡಲಾಗಿದೆ. ಈಗಾಗಲೇ ಪಿಪಿಇ ಕಿಟ್ ನೀಡಿದ್ದು, ಗ್ರಾಮೀಣ ಭಾಗಗಳ ಪಿಹೆಚ್​​ಸಿಗಳಿಗೂ ನೀಡಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ABOUT THE AUTHOR

...view details