ಸಚಿವ ಮಂಕಾಳು ವೈದ್ಯ ಸುದ್ದಿಗಾರರೊಂದಿಗೆ ಮಾತನಾಡಿದರು. ಶಿರಸಿ (ಉತ್ತರ ಕನ್ನಡ): ಶಾಸಕ ಶಿವರಾಮ್ ಹೆಬ್ಬಾರ್ ನಮ್ಮವರು, ನಮ್ಮ ಜೊತೆ ಇದ್ದವರು. ಕಾಂಗ್ರೆಸ್ಗೆ ಬರಲು ಬಾಗಿಲು ತೆರೆದಿಟ್ಟಿದ್ದೇವೆ. ಯಾವಾಗ ಬೇಕಾದರೂ ಅವರು ಕಾಂಗ್ರೆಸ್ ಪಕ್ಷಕ್ಕೆ ಬರಲಿ ಎಂದು ಮೀನುಗಾರಿಕೆ, ಬಂದರು, ಒಳನಾಡು ಜಲಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಹೇಳಿದರು.
ಶಿರಸಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಿವರಾಮ್ ಹೆಬ್ಬಾರ್ ನಮ್ಮ ಜೊತೆಯಲ್ಲೇ ಇದ್ದಾರೆ. ನಾವೆಲ್ಲಾ ಫ್ರೆಂಡ್ಸ್, ಅವರು ಕಾಂಗ್ರೆಸ್ಗೆ ಬರುವುದು ಮಾತ್ರ ಬಾಕಿ ಇದೆ. ಯಾವಾಗ ಬೇಕಾದರೂ ಬರುವುದಕ್ಕೆ ಅವರಿಗೆ ಸ್ವಾಗತವಿದೆ ಎಂದು ತಿಳಿಸಿದರು.
ಕೈ ಬಿಟ್ಟ ಬರಪೀಡಿತ ತಾಲೂಕು 2ನೆಯ ಪಟ್ಟಿಯಲ್ಲಿ ಸೇರ್ಪಡೆ: ಬರಗಾಲ ನಿರ್ವಹಣೆಗೆ ಆಯಾ ತಾಲೂಕಿಗೆ ಹಣ ಬಿಡುಗಡೆಯಾಗಿದ್ದು, ರೈತರಿಗೆ, ಜನಸಾಮಾನ್ಯರಿಗೆ ಹಾಗೂ ಜಾನುವಾರುಗಳಿಗೆ ಅಗತ್ಯ ವಸ್ತುಗಳನ್ನು ಪೂರೈಸಲು ಸರ್ಕಾರ ಸನ್ನದ್ಧವಾಗಿದೆ. ಭಯಪಡುವ ಅವಶ್ಯಕತೆಯಿಲ್ಲ. ಉತ್ತಮ ಮಳೆಯಾಗಿ ರೈತರು ಸಮೃದ್ಧ ಜೀವನ ಸಾಗಿಲು ಮಠ-ಮಂದಿರಕ್ಕೆ ಭೇಟಿ ನೀಡಿ ಪೂಜೆ ನೀಡುತ್ತಿದ್ದೇನೆ.
ಜಿಲ್ಲೆಯಲ್ಲಿ ಬರಗಾಲ ಪೀಡಿತ ಎಂದು ಕೈಬಿಟ್ಟ ತಾಲೂಕನ್ನು 2ನೆಯ ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗಿದೆ. ಬರಗಾಲ ಪ್ರದೇಶ ಎಂದೇ ಘೋಷಣೆಯಾಗಬೇಕಿಲ್ಲ. ಅಲ್ಲಿನ ರೈತರಿಗೆ, ಜನಸಾಮಾನ್ಯರಿಗೆ ತೊಂದರೆ ಆದರೆ ಪರಿಹಾರ ನೀಡಲು ಮುಖ್ಯಮಂತ್ರಿ ಬಳಿ ವಿನಂತಿಸಲಾಗಿದೆ. ಎಲ್ಲ ತಾಲೂಕಿನಲ್ಲಿ ಬರಗಾಲ ನಿರ್ವಹಣೆಗಾಗಿ ಮುಂಜಾಗ್ರತಾ ಕ್ರಮಕ್ಕೆ ಹಣ ಇಟ್ಟಿದ್ದೇವೆ. ಬಡವರ ಸೇವೆಯು ಕಾಂಗ್ರೆಸ್ ಸರ್ಕಾರದ ಮುಖ್ಯ ಗುರಿಯಾಗಿದೆ ಎಂದರು.
ಹಿಂದಿನ ಸರ್ಕಾರದ ಕರ್ಮಕಾಂಡದಿಂದ ಅಭಿವೃದ್ಧಿಗೆ ಹಿನ್ನೆಡೆ ಉಂಟಾಗಿದೆ. 10 ಸಾವಿರ ಕೋಟಿ ರೂ. ಗುತ್ತಿಗೆದಾರರಿಗೆ ನೀಡಬೇಕಾಗಿದೆ. ಹಂತ ಹಂತವಾಗಿ ಹಣ ಬಿಡುಗಡೆ ಮಾಡಲಾಗುತ್ತದೆ. ಬಿಜೆಪಿ ಸರ್ಕಾರದ ಹಾಗೆ ಸುಳ್ಳು ಹೇಳಲು ನಾವು ತಯಾರಿಲ್ಲ, ರಸ್ತೆಯ ಹೊಂಡ-ಗುಂಡಿಗಳನ್ನು ಸರಿಪಡಿಸಲಾಗುವುದು ಎಂದು ಭರವಸೆ ನೀಡಿದರು.
ನಿಗಮ ಮಂಡಳಿ ಅಧ್ಯಕ್ಷ ಉಪಾಧ್ಯಕ್ಷ ನೇಮಕ ಸದ್ಯಕ್ಕಿಲ್ಲ. ನಿಗಮಗಳಿಂದ ಜನಸಾಮಾನ್ಯರಿಗೆ ಸಹಾಯ-ಸಹಕಾರ ನೀಡಲಾಗುತ್ತಿದೆ. ಸರ್ಕಾರಕ್ಕೆ ಹೊರೆಯಾಗದಂತೆ, ಖರ್ಚಿಲ್ಲದೇ, ಮಂತ್ರಿಗಳು ನಿರ್ವಹಿಸುತ್ತಿದ್ದಾರೆ. ಬಡವರಿಗೆ ನೀಡಿದ್ದ 5 ಗ್ಯಾರಂಟಿಗಳನ್ನು ತಲುಪಿಸುವ ಕೆಲಸ ಮಾಡುತ್ತಿದ್ದೇವೆ. ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ಹೊಸ ಪಡಿತರ ಕಾರ್ಡ್ 3 ವರ್ಷದ ಹಿಂದೆಯೇ ಸ್ಥಗಿತಗೊಳಿಸಲಾಗಿದೆ. ಅದನ್ನು ಪುನಃ ಆರಂಭಿಸಲು ಸರ್ಕಾರ ಕ್ರಮ ವಹಿಸುತ್ತದೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಆರೋಪ ಮಾಡಿದ ಪಕ್ಷದ ಹಿರಿಯ ನಾಯಕ ಬಿ ಕೆ ಹರಿಪ್ರಸಾದ ಕುರಿತು ಪ್ರತಿಕ್ರಿಯಿಸಿದ ಸಚಿವ ವೈದ್ಯ, ಮುಖ್ಯಮಂತ್ರಿ ಬಗ್ಗೆ ಅವರು ಮಾತನಾಡಿಲ್ಲ. ನಮ್ಮ ಪಕ್ಷದ ಹಿರಿಯ ನಾಯಕರು. ಅವರ ಮಾರ್ಗದರ್ಶನ ನಮಗೆ ಅವಶ್ಯ ಎಂದರು.
ಹೈಕೋರ್ಟ್ ಮಾರ್ಗದರ್ಶನದಂತೆ ಜಿ.ಪಂ, ತಾ.ಪಂ, ವಿಂಗಡಣೆ: ತಾ ಪಂ, ಜಿ ಪಂ ಚುನಾವಣೆ ನಡೆಸಲು ನಮಗೆ ಭಯವಿಲ್ಲ. ಹೈಕೋರ್ಟ್ ಮಾರ್ಗದರ್ಶನದ ಮೇರೆಗೆ ವಿಂಗಡಣೆ ಮಾಡಲಾಗಿದೆ. ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ. ನಮ್ಮ ಕಾರ್ಯಕರ್ತರು ಸಂಘಟಿತರಾಗಿದ್ದು, ತಾ ಪಂ, ಜಿ ಪಂ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಲಿದ್ದಾರೆ. ಇದರಲ್ಲಿ ಅನುಮಾನವಿಲ್ಲ ಎಂದು ಮಂಕಾಳು ವೈದ್ಯ ಹೇಳಿದರು.
ಇದನ್ನೂಓದಿ:ಮೂವರು ಡಿಸಿಎಂ ಆಯ್ಕೆ ವಿಚಾರ ಹೈಕಮಾಂಡ್ ಮುಂದೆ ಇಲ್ಲ: ಪ್ರಿಯಾಂಕ್ ಖರ್ಗೆ