ಕಾರವಾರ (ಉತ್ತರ ಕನ್ನಡ):ಪ್ರತೀ ವರ್ಷ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುವ ಇಲ್ಲಿನ ರವೀಂದ್ರನಾಥ ಟಾಗೋರ್ ಕಡಲತೀರದಲ್ಲಿ ಇನ್ನಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗಿತ್ತು. ಆದರೀಗ ಕರಾವಳಿ ನಿಯಂತ್ರಣ ವಲಯದ (ಸಿಆರ್‌ಝಡ್) ಆದೇಶ ಉಲ್ಲಂಘಿಸಿರುವ ಆರೋಪದ ಹಿನ್ನೆಲೆಯಲ್ಲಿ ಮಾಡಿರುವ ಕಾಮಗಾರಿಗಳನ್ನು ಕೆಡವಲು ನ್ಯಾಯಾಲಯ ಆದೇಶ ನೀಡಿದೆ. ಇದರಿಂದ ಪ್ರವಾಸಿ ಚಟುವಟಿಕೆಗಳಿಗೆ ಹಿನ್ನಡೆಯಾಗುವ ಆತಂಕವಿದೆ.
ಕಡಲತೀರ ವಿಶಾಲವಾಗಿದ್ದರೂ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಸರ್ಕಾರ ಯಾವ ಕಾರ್ಯಗಳನ್ನೂ ಮಾಡಿಲ್ಲ ಎನ್ನುವ ಆರೋಪ ಈ ಹಿಂದೆ ಕೇಳಿ ಬಂದಿತ್ತು. ಹಲವು ವರ್ಷಗಳ ಹಿಂದೆ ಪ್ರವಾಸಿಗರನ್ನು ಸೆಳೆಯರು ಕಾರವಾರದ ಕಡಲತೀರದಲ್ಲಿ ಪುಟಾಣಿ ರೈಲು, ಹೋಟೆಲ್ಗಳಿದ್ದವು. ನಂತರದ ದಿನದಲ್ಲಿ ಎಲ್ಲವೂ ಹಾಳಾಗಿತ್ತು. ಮತ್ತೆ ಹೊಸ ಚಟುವಟಿಕೆಗಳನ್ನು ಪ್ರಾರಂಭಿಸುವಲ್ಲಿ ಸರ್ಕಾರ ಕೂಡ ಆಸಕ್ತಿ ತೋರಿಸುತ್ತಿಲ್ಲ ಎನ್ನುವ ಆರೋಪ ಕೇಳಿ ಬಂದಿತ್ತು.
ಈ ನಿಟ್ಟಿನಲ್ಲಿ ಅಂದಿನ ಪ್ರವಾಸೋದ್ಯಮ ಸಚಿವರಾಗಿದ್ದ ಆರ್.ವಿ.ದೇಶಪಾಂಡೆ, ಅಂದಿನ ಜಿಲ್ಲಾಧಿಕಾರಿಗಳಾಗಿದ್ದ ಎಸ್.ಎಸ್.ನಕುಲ್ ಅವರು ಕಾರವಾರದ ಪ್ರವಾಸೋದ್ಯಮ ಬೆಳವಣಿಗೆಗೆ ಕಡಲ ತೀರದಲ್ಲಿ ಫುಡ್ ಕೋರ್ಟ್, ರೆಸ್ಟೋರೆಂಟ್, ರಾಕ್ ಗಾರ್ಡನ್ ಸೇರಿದಂತೆ ಹಲವು ಚಟುವಟಿಕೆಗಳಿಗೆ ಅವಕಾಶ ನೀಡಿದ್ದರು. ಟೆಂಡರ್ ಮೂಲಕವೇ ಈ ಚಟುವಟಿಕೆಗೆ ಅವಕಾಶ ನೀಡಿದ್ದು ಇಂದು ಸಾವಿರಾರು ಪ್ರವಾಸಿಗರನ್ನು ಬರಮಾಡಿಕೊಳ್ಳುತ್ತಿದೆ. ಆದರೆ ಈಗ ಸ್ಥಳೀಯರು ಕಡಲತೀರದಲ್ಲಿ ಸಿ.ಆರ್.ಜೆಡ್ ನಿಯಮ ಉಲ್ಲಂಘಿಸಿ ಕಾಮಗಾರಿ ಮಾಡಲಾಗಿದೆ ಎಂದು ರಾಷ್ಟ್ರೀಯ ಹಸಿರು ಪೀಠದ ಮೊರೆ ಹೋಗಿದ್ದು, ಅಲ್ಲಿಂದ ರಾಜ್ಯ ಸಿಆರ್ಝೆಡ್ ಇಲಾಖೆಗೆ ಕ್ರಮ ಕೈಗೊಳ್ಳುವಂತೆ ಆದೇಶಿಸಲಾಗಿದೆ ಎನ್ನಲಾಗಿದೆ.
ರಾಕ್ ಗಾರ್ಡನ್ ತೆರವುಗೊಳಿಸಿದರೆ ಪ್ರವಾಸೋದ್ಯಮಕ್ಕೆ ಹಿನ್ನಡೆ:ಸದ್ಯ ಸ್ಥಳೀಯ ಸಿಆರ್ಝೆಡ್ ನವರು ಜಿಲ್ಲಾಡಳಿತಕ್ಕೆ ಕಡಲತೀರದಲ್ಲಿ ನಿರ್ಮಾಣವಾದ ಕಾಮಗಾರಿಗಳನ್ನು ತೆರವು ಮಾಡುವಂತೆ ತಿಳಿಸಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಬಗ್ಗೆ ಮಾತನಾಡಿದ ಸ್ಥಳೀಯ ನಾಗರಾಜ ಹರಪನಹಳ್ಳಿ, ಕಾರವಾರದಲ್ಲಿ ರಾಕ್ ಗಾರ್ಡನ್ ಸೇರಿದಂತೆ ಇತರೆ ಪ್ರವಾಸಿ ತಾಣಗಳನ್ನು ಸಿಆರ್‌ಜೆಡ್ ನಿಯಮ ಉಲ್ಲಂಘಿಸಿ ನಿರ್ಮಿಸಲಾಗುತ್ತಿದೆ. ಈ ಕುರಿತು ಅರಿವಿದ್ದರೂ ಕೂಡ ಆದೇಶವನ್ನು ಕತ್ತಲಲ್ಲಿಟ್ಟು ಅಧಿಕಾರಿಗಳು ಹಾಗೂ ಕಡಲತೀರ ಅಭಿವೃದ್ಧಿ ಸಮಿತಿ ಕಾಮಗಾರಿ ನಡೆಸಿತ್ತು. ಅಲ್ಲದೇ ರಾಕ್ ಗಾರ್ಡನ್ ಆದಾಯ ಯಾವುದೋ ಕಂಪನಿಗೆ ನೀಡಿದ್ದರಿಂದ ಸರ್ಕಾರಕ್ಕೆ ಇದರ ಲಾಭ ಸಿಗದಂತಾಗಿದೆ. ರಾಕ್ ಗಾರ್ಡನ್ ತೆರವುಗೊಳಿಸಿದರೆ ಪ್ರವಾಸೋದ್ಯಮ ಚಟುವಟಿಕೆಗೂ ಹಿನ್ನಡೆಯಾಗುವ ಸಾಧ್ಯತೆ ಇದೆ ಎಂದು ಹೇಳಿದರು.