ಕಾರವಾರ: ಅವರೆಲ್ಲರೂ ಸಣ್ಣ ದೋಣಿಗಳ ಮೂಲಕ ಸಾಂಪ್ರದಾಯಿಕ ಮೀನುಗಾರಿಕೆ ನಡೆಸುವ ಮೀನುಗಾರರು. ಲಕ್ಷಾಂತರ ವೆಚ್ಚದ ಸಣ್ಣ ದೋಣಿ, ಬಲೆಗಳ ಮೂಲಕ ಜೀವನ ಕಂಡುಕೊಂಡಿರುವ ಮೀನುಗಾರರಿಗೆ ಇದೀಗ ನೌಕಾನೆಲೆ ಸಿಬ್ಬಂದಿ ದುಃಸ್ವಪ್ನವಾಗಿ ಕಾಡುತ್ತಿದ್ದಾರೆ ಎನ್ನಲಾಗಿದೆ. ನೌಕಾನೆಲೆ ಹತ್ತಿರ ಮೀನುಗಾರಿಕೆ ಮಾಡುವ ಆರೋಪದಡಿ ಮೀನುಗಾರರ ಬಲೆಗಳನ್ನು ತುಂಡರಿಸಿ ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡುತ್ತಿರುವ ಘಟನೆಗಳು ಪದೇ ಪದೆ ಮರುಕಳಿಸುತ್ತಿದ್ದು, ಜನ ನೌಕಾನೆಲೆ ಸಿಬ್ಬಂದಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಹೌದು, ಕರಾವಳಿ ತೀರದಲ್ಲಿ ಬದುಕು ಕಟ್ಟಿಕೊಂಡು ಜೀವನ ಸಾಗಿಸುತ್ತಿರುವ ಸಾವಿರಾರು ಕುಟುಂಬಗಳಿಗೆ ಮೀನುಗಾರಿಕೆಯೇ ಜೀವನಾಧಾರವಾಗಿದೆ. ಯಾಂತ್ರಿಕ ಮೀನುಗಾರಿಕಾ ಬೋಟುಗಳ ಮೀನುಗಾರರು ಆಳಸಮುದ್ರಕ್ಕೆ ತೆರಳಿ ಮೀನುಗಾರಿಕೆ ನಡೆಸಿದರೆ ಸಣ್ಣ ಬೋಟುಗಳ ಮೀನುಗಾರರು ಸಮುದ್ರ ತೀರದಿಂದ 20 ಕಿ.ಮೀ ವ್ಯಾಪ್ತಿಯಲ್ಲಿ ಮೀನುಗಾರಿಕೆ ನಡೆಸುತ್ತಾರೆ. ಆದರೆ, ಕಾರವಾರ ತಾಲೂಕಿನ ಅರಬ್ಬೀ ಸಮುದ್ರ ವ್ಯಾಪ್ತಿಯಲ್ಲಿ ಮೀನುಗಾರಿಕೆ ನಡೆಸುವ ಸಣ್ಣ ಬೋಟುಗಳ ಮೀನುಗಾರರಿಗೆ ಇದೀಗ ನೌಕಾನೆಲೆ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
"ಕೆಲ ದಿನಗಳ ಹಿಂದೆ ತಾಲೂಕಿನ ಮುದಗಾ ಭಾಗದ ಮೀನುಗಾರರು ನೌಕಾನೆಲೆ ವ್ಯಾಪ್ತಿಯಿಂದ ಸುಮಾರು ಏಳೆಂಟು ಕಿ.ಮೀ ದೂರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದರು. ಈ ವೇಳೆ, ಏಕಾಏಕಿ ಸ್ಪೀಡ್ ಬೋಟ್‌ನಲ್ಲಿ ಆಗಮಿಸಿದ ನೌಕಾನೆಲೆ ಅಧಿಕಾರಿಗಳು ಮೀನುಗಾರರು ಹಾಕಿದ್ದ ಬಲೆಗಳನ್ನು ತುಂಡರಿಸಿ ತೆರಳಿದ್ದಾರೆ. ಈ ಹಿಂದೆಯೂ ಸಹ ಇದೇ ರೀತಿ ಬಲೆಗಳನ್ನ ಕತ್ತರಿಸಿ ಹಾಕಿದ್ದು, ವಿನಾಕಾರಣ ತೊಂದರೆ ನೀಡುತ್ತಾರೆ. ಅಲ್ಲದೆ, ಕಬ್ಬಿಣದ ರಾಡ್ಗಳಿಂದ ಹಲ್ಲೆ ಮಾಡುತ್ತಾರೆ" ಎಂದು ಮೀನುಗಾರರಾದ ಶ್ರೀಕಾಂತ ದುರ್ಗೇಕರ್ ಆರೋಪಿಸಿದ್ದಾರೆ.