ಕರ್ನಾಟಕ

karnataka

ETV Bharat / state

ಕಾರ್ಮಿಕರಿಂದ ಮಲ ಹೊರೆಸಿದ ಆರೋಪ : ಕಟ್ಟಡ ಮಾಲೀಕರ ವಿರುದ್ಧ ಪ್ರಕರಣ ದಾಖಲು - ಶೌಚಾಲಯದ

ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ಕಾರ್ಮಿಕರಿಂದ ಮಲ ಹೊರೆಸಿದ ಆರೋಪ ಸಂಬಂಧ ಕಟ್ಟಡ ಮಾಲೀಕನ ವಿರುದ್ಧ ಪ್ರಕರಣ ದಾಖಲಾಗಿದೆ. ಮಾಲೀಕನ ಬಂಧನಕ್ಕೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

Etv Bharat
Etv Bharat

By ETV Bharat Karnataka Team

Published : Jan 8, 2024, 10:10 PM IST

ಶಿರಸಿ ( ಉತ್ತರಕನ್ನಡ): ಕಾರ್ಮಿಕರಿಂದ ಶೌಚಾಲಯದ ಮಲವನ್ನು ಹೊರೆಸಿದ ಅಮಾನವೀಯ ಘಟನೆ ಜಿಲ್ಲೆಯ ಶಿರಸಿ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಕಾರ್ಮಿಕರಿಂದ ಮಲ ಹೊರೆಸಿದ ಕಟ್ಟಡದ ಮಾಲೀಕರ ವಿರುದ್ಧ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಟ್ಟಡದ ಮಾಲೀಕ ಮಹಾಬಲೇಶ್ವರ ಬಿ ಬೈಂದೂರು ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.

ಶಿರಸಿ ನಗರದ ದೇವಿಕೇರಿ ಹತ್ತಿರದ ಗೌಡಳ್ಳಿ ಹೋಟೆಲ್​ ಹಿಂಭಾಗ (ಭಗತಸಿಂಗ್ ರಸ್ತೆ)ದಲ್ಲಿ ಮಹಾಬಲೇಶ್ವರ ಅವರು ಹೊಸದಾಗಿ ಕಟ್ಟಡ ನಿರ್ಮಿಸುತ್ತಿದ್ದಾರೆ. ಜನವರಿ 4 ರಂದು ಬೆಳಗ್ಗೆ 11 ಗಂಟೆಯ ಸುಮಾರಿಗೆ ತಮ್ಮ ಕಟ್ಟಡ ನಿರ್ಮಾಣ ಕೆಲಸಕ್ಕೆ ಬಂದಿದ್ದ ಕಾರ್ಮಿಕರನ್ನು ಬಳಸಿಕೊಂಡು ಸ್ಥಳದಲ್ಲಿರುವ ತಮ್ಮ ಹಳೆಯ ಶೌಚಾಲಯದ ಗುಂಡಿಯನ್ನು ಸ್ವಚ್ಛಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕುರಿತು ಸಾರ್ವಜನಿಕರಿಂದ ಮಾಹಿತಿ ತಿಳಿದ ಹಿನ್ನೆಲೆ ಮೇಲಾಧಿಕಾರಿಗಳ ಸೂಚನೆಯ ಮೇರೆಗೆ ಜನವರಿ 8ರಂದು(ಸೋಮವಾರ) ಬೆಳಗ್ಗೆ 10.45 ಕ್ಕೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಸ್ಥಳ ಪರಿಶೀಲನೆ ನಡೆಸಿದಾಗ ಶೌಚಾಲಯದ ಗುಂಡಿ ಇರುವುದು ಹಾಗೂ ಅದರಲ್ಲಿದ್ದ ಮಲವನ್ನು ಕಾರ್ಮಿಕರ ಮೂಲಕ ಸಾಗಿಸಿರುವುದು ಸ್ಥಳದಲ್ಲಿ ಬಿದ್ದಿದ್ದ ಮಲದ ಕುರುಹುಗಳಿಂದ ಸ್ಪಷ್ಟವಾಗಿ ಕಂಡು ಬಂದಿದೆ.

ಈ ಸಂಬಂಧ ಕಟ್ಟಡದ ಮಾಲೀಕ ಪಡ್ತಿಗಲ್ಲಿಯ ಮಹಾಬಲೇಶ್ವರ ಬಿ ಬೈಂದೂರು (60) (ಎಮ್.ಬಿ. ಬೈಂದೂರ್) ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನಗರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ರಾಮಚಂದ್ರ ಮಂಜುನಾಥ ವೆರ್ಣೀಕರ್ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪಿಎಸ್.ಐ ರತ್ನಾ ಕುರಿ ಅವರು ಆರೋಪಿಯ ಬಂಧನಕ್ಕೆ ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ :ಮಲ ಹೊರುವ ಪದ್ಧತಿ ನಿಷೇಧ ಕಾಯ್ದೆಯಡಿ ದಾಖಲಾದ ಪ್ರಕರಣಗಳಲ್ಲಿ ಶಿಕ್ಷೆಯಾಕಾಗಿಲ್ಲ: ಸರ್ಕಾರಕ್ಕೆ ಹೈಕೋರ್ಟ್ ಪ್ರಶ್ನೆ

ABOUT THE AUTHOR

...view details