ಕಾರವಾರ: ದೇಶಕ್ಕಾಗಿ ಕಿರಿಯ ವಯಸ್ಸಿನಲ್ಲೇ ಪ್ರಾಣತ್ಯಾಗ ಮಾಡಿದ ಹೆಮ್ಮೆಯ ವೀರಯೋಧನ ನೆನಪಿಗಾಗಿ ಕುಟುಂಬಸ್ಥರು, ಅಭಿಮಾನಿಗಳು ಆತನ ಮನೆಯ ಸಮೀಪದ ರಸ್ತೆ ಪಕ್ಕದ ಖಾಸಗಿ ಜಮೀನಿನಲ್ಲಿ ಸ್ಮಾರಕವೊಂದನ್ನು ನಿರ್ಮಿಸಿದ್ದರು. ಆದರೆ, ಇದೀಗ ಸ್ಮಾರಕವಿರುವ ಪ್ರದೇಶಕ್ಕೆ ಹೊಂದಿಕೊಂಡಿರುವ ಮನೆಯವರು ಗೇಟ್ ನಿರ್ಮಿಸಿದ್ದು, ಸ್ಮಾರಕಕ್ಕೆ ಹಾನಿ ಮಾಡಲು ಯತ್ನಿಸುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಉತ್ತರಕನ್ನಡ ಜಿಲ್ಲೆಯ ಕಾರವಾರ ನಗರದ ಸಾಯಿಕಟ್ಟಾ ನಿವಾಸಿ ಸುರೇಶ್ ನಾಯ್ಕ ಎಂಬುವರ ಕಿರಿಯ ಮಗ ವಿಜಯಾನಂದ ನಾಯ್ಕ ಭಾರತೀಯ ಸೇನೆಯಲ್ಲಿ ಯೋಧನಾಗಿ ಸೇವೆ ಸಲ್ಲಿಸುತ್ತಿದ್ದರು. 2018ರ ಜುಲೈ 9 ರಂದು ಛತ್ತೀಸ್‌ಗಢದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವೇಳೆ ನಕ್ಸಲ್ ಬಾಂಬ್ ದಾಳಿಗೆ ತುತ್ತಾಗಿ ಹುತಾತ್ಮನಾಗಿದ್ದರು. ಅವರ ಹುಟ್ಟೂರಾದ ಕಾರವಾರದಲ್ಲಿ ಬೃಹತ್ ಮೆರವಣಿಗೆ ಮಾಡುವ ಮೂಲಕ ಹುತಾತ್ಮ ಯೋಧನ ಅಂತ್ಯಸಂಸ್ಕಾರ ನೆರವೇರಿಸಿದ್ದು, ಅದರಂತೆ ಆತನ ನೆನಪಿಗಾಗಿ ಮನೆಯ ಸಮೀಪದ ಖಾಸಗಿ ಜಮೀನಿನಲ್ಲಿ ರಸ್ತೆಗೆ ಹೊಂದಿಕೊಂಡು ಸ್ಮಾರಕವೊಂದನ್ನು ನಿರ್ಮಿಸಲಾಗಿತ್ತು.
ಇದಾಗಿ ಎರಡು ವರ್ಷಗಳ ಬಳಿಕ 2020ರಲ್ಲಿ ಸ್ಮಾರಕವಿದ್ದ ಪ್ರದೇಶಕ್ಕೆ ಹೊಂದಿಕೊಂಡಿದ್ದ ಜಾಗವನ್ನು ಶ್ಯಾಮ್ ನಾಯ್ಕ ಎಂಬುವರು ಖರೀದಿಸಿದ್ದು, ಸ್ಮಾರಕವಿರುವ ಪ್ರದೇಶದ ಬಳಿ ತಮ್ಮ ಕಾಂಪೌಂಡ್ ತೆರವುಗೊಳಿಸಿ ಗೇಟ್ ನಿರ್ಮಿಸಿಕೊಂಡಿದ್ದಾರೆ. ಅಲ್ಲದೇ, ದುರುದ್ದೇಶಪೂರ್ವಕವಾಗಿ ಸ್ಮಾರಕಕ್ಕೆ ಹಾನಿಯಾಗುವಂತೆ ವಾಹನವನ್ನು ಚಲಾಯಿಸುತ್ತಿದ್ದು, ಇದನ್ನು ಪ್ರಶ್ನಿಸಿದ್ದಕ್ಕೆ ವಿನಾಕಾರಣ ಜಗಳ ತೆಗೆದು ಸ್ಮಾರಕ ತೆರವುಗೊಳಿಸುವುದಾಗಿ ಬೆದರಿಕೆ ಒಡ್ಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.