ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಭಟ್ಕಳ: ಈ ಹಿಂದೆ ಕುಂಕುಮ ಹಚ್ಚದವರು, ಕೇಸರಿ ಕಂಡರೆ ದೂರ ಸರಿಯುವವರೂ ಕೂಡಾ ಇಂದು ನಾನೂ ಹಿಂದೂ ಎಂದು ಹಿಂದೆಮುಂದೆ ನೋಡದೇ ಹೇಳುತ್ತಿದ್ದಾರೆ. ಹಿಂದುತ್ವದ ಮಹತ್ವವೇನು ಅನ್ನೋದು ಈಗ ಅವರಿಗೆ ಅರಿವಾಗುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ. ನಗರದಲ್ಲಿರುವ ಬಿಜೆಪಿ ಕಾರ್ಯಾಲಯಕ್ಕೆ ಇಂದು ಭೇಟಿ ನೀಡಿದ ಅವರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ಚುನಾವಣೆ ಹತ್ತಿರ ಬರುತ್ತಿದ್ದಂತೆ ಅವರ ಬಾಯಿಯಲ್ಲಿಯೂ ಹಿಂದೂ ಪದ ಹೊರ ಬರುತ್ತದೆ ಎಂದಾದರೆ ಬಿಜೆಪಿ ಹಾಗೂ ಹಿಂದುತ್ವದ ಶಕ್ತಿ ಎಷ್ಟು ಎನ್ನುವುದನ್ನು ನಮ್ಮ ಕಾರ್ಯಕರ್ತರು ಅರ್ಥ ಮಾಡಿಕೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಹೆಸರು ಟೀಕೆ ಮಾಡಿದರು. ನಮ್ಮ ಪಕ್ಷದ ಸಿದ್ಧಾಂತ ಜಾತಿ ಮೊದಲು, ಕುಟುಂಬ ಮೊದಲು ಎನ್ನುವುದಲ್ಲ, ಇದರ ಬದಲಿಗೆ ರಾಷ್ಟ್ರ ಮೊದಲು ಎನ್ನುವ ಪಕ್ಷ ನಮ್ಮದು ಎಂದು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಹೆಸರೇಳದೇ ಜಾತಿ ಮತ್ತು ಕುಟುಂಬ ರಾಜಕಾರಣವನ್ನು ವಾಕ್ಸಮರ ನಡೆಸಿದರು.
ಬಿಜೆಪಿಯಲ್ಲಿ ಕಾರ್ಯಕರ್ತರೇ ಮಾಲೀಕರು, ಬೇರೆ ಮಾಲೀಕರಿಲ್ಲ. ಆದರೆ ಜೆಡಿಎಸ್ ಪಕ್ಷದಲ್ಲಿ ಎಚ್.ಡಿ.ದೇವೇಗೌಡರು, ಕುಮಾರಸ್ವಾಮಿಯವರೇ ಮಾಲೀಕರು. ಕಾಂಗ್ರೆಸ್ ಪಕ್ಷದಲ್ಲಿ ಮಲ್ಲಿಕಾರ್ಜುನ ಖರ್ಗೆ ಮ್ಯಾನೇಜರ್. ಅಲ್ಲಿ ಮಾಲೀಕರು ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಎಂದರು. ಆದರೆ, ಪಕ್ಷದ ಜವಾಬ್ದಾರಿಯನ್ನು ಕಾರ್ಯಕರ್ತರಿಗೆ ನೀಡಿದ ಏಕೈಕ ಪಕ್ಷ ನಮ್ಮದು. ನಮ್ಮ ಕಾರ್ಯಕರ್ತರು ಪಕ್ಷಕ್ಕಾಗಿ, ಸೈದ್ಧಾಂತಿಕ ಕಾರ್ಯಕ್ರಮಕ್ಕೆ ನಾವೆಲ್ಲರೂ ಒಂದಾಗಬೇಕು. ರಾಜ್ಯ, ರಾಷ್ಟ್ರದಲ್ಲಿ ಬಿಜೆಪಿ ಇದೆ. ಮುಂದೆಯೂ ಬಿಜೆಪಿಯನ್ನು ಅಧಿಕಾರಕ್ಕೆ ತರುವುದು ಕಾರ್ಯಕರ್ತರ ಕರ್ತವ್ಯ ಎಂದು ಹೇಳಿದರು.
1952ರಿಂದಲೂ ಬಗೆಹರಿಯದ ಕಾಶ್ಮೀರ ಸಮಸ್ಯೆಯನ್ನು ಪ್ರಧಾನಮಂತ್ರಿ ಮೋದಿ ಬಗೆಹರಿಸಿದ್ದಾರೆ. ಆದರೆ ಇದೇ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕಾಶ್ಮೀರದಲ್ಲಿ ಆರ್ಟಿಕಲ್ 370 ಮರು ಜಾರಿ ಮಾಡುತ್ತೇವೆ ಎನ್ನುತ್ತಾರೆ ಎಂದರೆ ಅವರ ಮನಸ್ಥಿತಿ ಏನು ಎಂಬುದನ್ನು ಜನತೆ ಅರ್ಥಮಾಡಿಕೊಳ್ಳಬೇಕು. ಅಯೋಧ್ಯೆ ಸಮಸ್ಯೆಯನ್ನು ಬಗೆಹರಿಸಿ, ಅಲ್ಲಿ ಭವ್ಯ ರಾಮ ಮಂದಿರ ನಿರ್ಮಾಣವಾಗುತ್ತಿದೆ. ಕೇದಾರನಾಥ, ಕಾಶಿ, ಉಜ್ಜಯಿನಿ, ಸೊಮನಾಥ ಹೀಗೆ ಎಲ್ಲಾ ಧಾರ್ಮಿಕ ಕೇಂದ್ರಗಳನ್ನು ಉದ್ಧಾರ ಮಾಡಿದ ಕೇಂದ್ರ ಸರ್ಕಾರ ಅಭಿವೃದ್ಧಿಯಲ್ಲಿಯೂ ಕೂಡಾ ಎಂದೂ ಹಿಂದೆ ಬಿದ್ದಿಲ್ಲ. ರಾಜ್ಯದಲ್ಲಿಯೂ ಕೂಡಾ ಹೆದ್ದಾರಿಗಳ ಅಭಿವೃದ್ಧಿ, ವಿಮಾನ ನಿಲ್ದಾಣಗಳ ಅಭಿವೃದ್ಧಿ ಮಾಡುವಾಗ ಯಾವುದೇ ತಾರತಮ್ಯ ಮಾಡಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಸುನೀಲ್ ನಾಯ್ಕ, ಕಳೆದ ಐದು ವರ್ಷಗಳಲ್ಲಿ ನಮ್ಮ ಕಾರ್ಯಕರ್ತರ ಹಿತ ಕಾಪಾಡುವಲ್ಲಿ ಬಹಳಷ್ಟು ಶ್ರಮಿಸಿದ್ದೇನೆ. ಕಾರ್ಯಕರ್ತರೇ ನಮ್ಮ ಪಕ್ಷದ ಆಸ್ತಿಯಾಗಿದ್ದರಿಂದ ಯಾವುದೇ ತೊಂದರೆ ಆದರೂ ಅವರೊಂದಿಗೆ ನಿಂತು ಅವರ ಹಿತ ಕಾಪಾಡುವಲ್ಲಿ ಮುಂದಾಗಿದ್ದೇನೆ. ಈ ಹಿಂದೆ 2012 ರಿಂದ 2018ರ ತನಕ ನಮ್ಮ ಕಾರ್ಯಕರ್ತರ ಮೇಲೆ 3,218 ಪ್ರಕರಣಗಳು ದಾಖಲಾಗಿದ್ದವು. ಆದರೆ 2018ರಿಂದ ಇಲ್ಲಿಯ ತನಕ ನಮ್ಮ ಕಾರ್ಯಕರ್ತರ ಮೇಲೆ ದಾಖಲಾಗಿರುವ ಪ್ರಕರಣಗಳ ಸಂಖ್ಯೆ 200 ದಾಟಿಲ್ಲ ಎನ್ನುವುದು ನನಗೆ ಹೆಮ್ಮೆಯ ಸಂಗತಿ ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ವೆಂಕಟೇಶ ನಾಯಕ, ಮಂಡಲ ಅಧ್ಯಕ್ಷ ಸುಬ್ರಾಯ ದೇವಾಡಿಗ ಮಾತನಾಡಿದರು. ಪಶ್ಚಿಮಘಟ್ಟ ಕಾರ್ಯಪಡೆಯ ಅಧ್ಯಕ್ಷ ಗೋವಿಂದ ನಾಯ್ಕ, ಕ್ಷೇತ್ರ ಪ್ರಭಾರಿ ಎನ್.ಎಸ್.ಹೆಗಡೆ, ಪ್ರಥಮ ನಾಯಕ, ರವಿ ನಾಯಕ, ರಾಜೇಶ ನಾಯ್ಕ, ಭಾಸ್ಕರ ದೈಮನೆ, ಮೋಹನ ನಾಯ್ಕ, ಸುರೇಶ ನಾಯ್ಕ, ಗೋವರ್ಧನ ನಾಯ್ಕ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.
ಇದನ್ನೂ ಓದಿ:ನರೇಂದ್ರ ಮೋದಿ ಆನೆಯಿದ್ದ ಹಾಗೆ: ಮಾಜಿ ಸಚಿವ ಈಶ್ವರಪ್ಪ