ಶಿರಸಿ: ಕೋವಿಡ್ ಸಾಂಕ್ರಾಮಿಕದ ಕಾರಣಕ್ಕೆ ಕಳೆದ ಎರಡು ವರ್ಷಗಳಿಂದ ಸಂಭ್ರಮ ಕಳೆದುಕೊಂಡಿದ್ದ ಸಾರ್ವಜನಿಕ ಗಣೇಶೋತ್ಸವ ಆಚರಣೆ ಈ ಬಾರಿ ಕಳೆಗಟ್ಟಿದೆ. ಇದಕ್ಕಾಗಿ ಶಿರಸಿ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಭರ್ಜರಿ ತಯಾರಿ ನಡೆದಿದ್ದು, ಉತ್ಸವ ಆಯೋಜಿಸುವ ಸಮಿತಿಗಳು ಭರದ ಸಿದ್ಧತೆಯಲ್ಲಿವೆ. ಕಳೆದ ಎರಡು ವರ್ಷಗಳಿಂದ ಉತ್ಸವಕ್ಕೆ ವಿಧಿಸಿದ್ದ ನಿರ್ಬಂಧಗಳು ಈ ಬಾರಿ ಇಲ್ಲದ ಕಾರಣ ಹಬ್ಬದ ಸಂಭ್ರಮ ಇಮ್ಮಡಿಗೊಳ್ಳುವ ಸಾಧ್ಯತೆ ಇದೆ.
ಹಿಂದಿನ ಎರಡು ಗಣೇಶ ಚತುರ್ಥಿ ಹಬ್ಬಗಳಲ್ಲೂ ಸಾರ್ವಜನಿಕವಾಗಿ ಪೂಜಿಸಲ್ಪಡುವ ಗಣೇಶಮೂರ್ತಿ ಎರಡು ಅಡಿ ಮೀರಿರಬಾರದು ಎಂಬ ನಿಯಮ ಹೇರಲಾಗಿತ್ತು. ಹೀಗಾಗಿ ದೊಡ್ಡ ಮೂರ್ತಿಗಳು ಕಾಣದಂತಾಗಿತ್ತು. ಈಗ ಪುನಃ ಎಲ್ಲೆಡೆ ಸಾರ್ವಜನಿಕ ಉತ್ಸವಕ್ಕಾಗಿ ದೊಡ್ಡ ಗಾತ್ರದ ಮೂರ್ತಿಗಳು ಸಿದ್ಧಗೊಳ್ಳತೊಡಗಿವೆ. ಶಿರಸಿ ತಾಲೂಕಿನಲ್ಲಿ ಸುಮಾರು 48ಕ್ಕೂ ಹೆಚ್ಚು ಕಡೆಗಳಲ್ಲಿ ಸಾರ್ವಜನಿಕ ಉತ್ಸವ ಆಯೋಜನೆಗೊಳ್ಳುತ್ತಿದ್ದು, ಅಲ್ಲಿ ಪ್ರತಿಷ್ಠಾಪನೆಗೊಳ್ಳುವ ಮೂರ್ತಿಗಳನ್ನು ಕಲಾವಿದರು ನಿರ್ಮಿಸುತ್ತಿದ್ದಾರೆ.