ಕಾರವಾರ:ನನ್ನ ಜೀವನದಲ್ಲಿ ಇದೊಂದು ಬಹು ಅಪರೂಪದ ಘಳಿಗೆ. ಆರು ದಶಕಗಳ ಹಿಂದೆ ಜಾರಿದ ಹಳೆಯ ಮಧುರ ನೆನಪುಗಳು. ಸ್ನೇಹಿತರ ಒಡಗೂಡಿ ಆಡಿದ ಆಟ, ಶಿಕ್ಷಕರ ಪಾಠ ಎಲ್ಲವೂ ಒಮ್ಮೆಲೇ ನೆನಪಿಗೆ ಬಂತು, ಒಂದು ಕ್ಷಣ ನನ್ನ ಕಣ್ಣಾಲಿಗಳು ಒದ್ದೆಯಾದವು, ಇದೊಂದು ಥರ ನನ್ನನ್ನು ಬಾಲ್ಯಕ್ಕೆ ಕರೆದೊಯ್ದ ಅನುಭವ. ಆ ಕಟ್ಟಡವೆ ಹಾಗೆ, ನನ್ನ ಶೈಕ್ಷಣಿಕ ಜೀವನದ ಮೊದಲ ಹೆಜ್ಜೆ, ಮೊದಲ ಅಕ್ಷರ, ಶಿಕ್ಷಕರ ಮೊದಲ ಏಟಿಗೆ ಮೂಕ ಸಾಕ್ಷಿಯಾಗಿದ್ದು, ಇದೇ ಕಟ್ಟಡ. ಹೀಗೆ ಶಾಲೆ ಕಟ್ಟಡದ ಬಗ್ಗೆ ಹಳೆಯ ನೆನಪುಗಳನ್ನು ಕೆದಕಿ ಭಾವನೆಗಳನ್ನು ಹಂಚಿಕೊಂಡವರು ಮಾಜಿ ಸಚಿವ ಹಳಿಯಾಳದ ಹಾಲಿ ಶಾಸಕ ಆರ್.ವಿ. ದೇಶಪಾಂಡೆ.
ಹೌದು, ಹಳಿಯಾಳದ ಬಿಇಒ ಕಚೇರಿ ಆವರಣದಲ್ಲಿದ್ದ ಸರ್ಕಾರಿ ಮರಾಠಿ ಪ್ರಾಥಮಿಕ ಶಾಲೆ ಆರ್. ವಿ. ದೇಶಪಾಂಡೆಯವರು ಪ್ರಾಥಮಿಕ ಶಿಕ್ಷಣ ಪೂರೈಸಿದ ಶಾಲೆ. ಆದರೆ, ಮಕ್ಕಳ ಸಂಖ್ಯೆ ಕಡಿಮೆಯಾಗಿ 2005 ರಲ್ಲಿ ಮುಚ್ಚಲಾಗಿತ್ತು. ಬಳಿಕ ಕಟ್ಟಡವನ್ನು ಶಿಕ್ಷಣ ಇಲಾಖೆ ಸ್ವಲ್ಪ ವರ್ಷ ಬಳಕೆ ಮಾಡಿತ್ತಾದರೂ ನಂತರ ದುರಸ್ತಿಗೆ ತಲುಪಿದ ಹಿನ್ನೆಲೆಯಲ್ಲಿ ಪಾಳು ಬಿದ್ದಿತ್ತು. ಆದರೆ, ಇದೀಗ ಕಂಪನಿಯೊಂದರ ಸಹಕಾರದಲ್ಲಿ ನವೀಕರಣಗೊಂಡಿದ್ದು, ಮತ್ತೆ ಉಪಯೋಗಕ್ಕೆ ಬರುವಂತಾಗಿದೆ.