ಕಾರವಾರ: ಕೊರೊನಾ ಸೋಂಕಿನಿಂದಾಗಿ ತಂದೆ-ತಾಯಿ ಇಬ್ಬರನ್ನು ಕಳೆದುಕೊಂಡು ಅನಾಥರಾದ ಮಕ್ಕಳ ಪೈಕಿ ರಾಜ್ಯದಲ್ಲಿ ಒಟ್ಟು 19 ಕುಟುಂಬಗಳ 25 ಮಕ್ಕಳಿದ್ದು, ಅಂತವರ ಸಮಸ್ಯೆ ಆಲಿಸಿ ಸರ್ಕಾರದಿಂದ ನಿಗದಿಪಡಿಸಿದ ಸೌಲಭ್ಯಗಳನ್ನು ತಕ್ಷಣ ಪೂರೈಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಉತ್ತರಕನ್ನಡ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಕೊರೊನಾದಿಂದ ಅನಾಥರಾದ ಮಕ್ಕಳ ಉಸ್ತುವಾರಿಯ ರಾಜ್ಯ ನೋಡಲ್ ಆಫೀಸರ್ ಕೆ.ಪಿ. ಮೋಹನರಾಜ್ ಹೇಳಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಉತ್ತರಕನ್ನಡ ಜಿಲ್ಲಾ ಉಸ್ತುವಾರಿ ಜೊತೆಗೆ ಕೊವಿಡ್ನಿಂದಾಗಿ ತಂದೆ ತಾಯಿ ಕಳೆದುಕೊಂಡು ರಾಜ್ಯದಲ್ಲಿ ಅನಾಥರಾದ ಮಕ್ಕಳ ನೋಡೆಲ್ ಆಫೀಸರ್ ಆಗಿಯೂ ನೇಮಕ ಮಾಡಿದೆ. ಅದರಂತೆ ಕಳೆದ ಕೆಲ ದಿನಗಳಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ಅನಾಥ ಮಕ್ಕಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಅವರ ಸಮಸ್ಯೆ ಆಲಿಸಲಾಗಿದೆ. ಸದ್ಯ ರಾಜ್ಯದಲ್ಲಿ ತಂದೆ ತಾಯಿ ಇಬ್ಬರನ್ನು ಕಳೆದುಕೊಂಡು ಅನಾಥರಾದವರ ಪೈಕಿ 19 ಕುಟುಂಬಗಳ 25 ಮಕ್ಕಳಿದ್ದಾರೆ ಎಂದು ಮಾಹಿತಿ ನೀಡಿದರು.
ರಾಯಚೂರು 4, ಬಾಗಲಕೋಟೆ 3, ಬೆಳಗಾವಿ, ಗದಗ, ಕೊಡಗು, ಮೈಸೂರು, ಬೆಂಗಳೂರು ನಗರ, ಬೀದರದಲ್ಲಿ ತಲಾ 2 ಹಾಗೂ ಚಾಮರಾಜನಗರ, ಚಿಕ್ಕಮಗಳೂರು, ದಾವಣಗೆರೆ, ರಾಮನಗರ, ಮಂಡ್ಯ, ಕೋಲಾರದಲ್ಲಿ ತಲಾ ಒಬ್ಬರು ತಂದೆ ತಾಯಿ ಇಬ್ಬರನ್ನು ಕಳೆದುಕೊಂಡವರಿದ್ದಾರೆ ಎಂದು ತಿಳಿಸಿದರು.