ಕಾರವಾರ:ಗುತ್ತಿಗೆದಾರನಿಂದ ಲಂಚ ಪಡೆಯುತ್ತಿದ್ದ ಜಿಲ್ಲಾಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿಯೋರ್ವ ಭ್ರಷ್ಟಾಚಾರ ನಿಗ್ರಹದಳದ ಬಲೆಗೆ ಬಿದ್ದಿರುವ ಘಟನೆ ಕಾರವಾರದಲ್ಲಿ ಇಂದು ನಡೆದಿದೆ.
ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಬಲೆಗೆ ಬಿದ್ದ ಜಿಲ್ಲಾಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿ - ACB
ಗುತ್ತಿಗೆದಾರನೋರ್ವನಿಂದ ಲಂಚ ಸ್ವೀಕರಿಸುತ್ತಿದ್ದ ವೇಳೆ ಎಸ್.ಆರ್. ಪಾವಸ್ಕರ್ ಎಂಬ ಜಿಲ್ಲಾಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿಯನ್ನು ಎಸಿಬಿ ಅಧಿಕಾರಿಗಳು ದಾಳಿ ಮಾಡಿ ಹಣದ ಸಹಿತ ವಶಕ್ಕೆ ಪಡೆದಿದ್ದಾರೆ.
ಎಸ್.ಆರ್. ಪಾವಸ್ಕರ್ ಎಸಿಬಿ ಬಲೆಗೆ ಬಿದ್ದ ಅಧಿಕಾರಿ. ಜಿಲ್ಲಾಸ್ಪತ್ರೆಯ ಎದುರು ಬಿದ್ದಿರುವ ಕಂಪೌಂಡ್ ಗೋಡೆಯನ್ನು ಪುನಃ ನಿರ್ಮಿಸಲು ಸುಮಿತ್ ಅಸ್ನೋಟಿಕರ್ ಎಂಬುವವರು ಗುತ್ತಿಗೆ ಪಡೆದಿದ್ದರು. ಆದರೆ ಕಳೆದ ಮೂರು ತಿಂಗಳಿಂದ ₹1ಲಕ್ಷದ ಬಿಲ್ ಮಾಡಲು ಸಹಾಯಕ ಆಡಳಿತಾಧಿಕಾರಿ ಪಾವಸ್ಕರ್ ಶೇ. 10 ರಂತೆ ₹10 ಸಾವಿರ ಕಮೀಷನ್ ಕೇಳಿದ್ದರು. ಆದರೆ ಈ ಬಗ್ಗೆ ಸುಮಿತ್ ಅಸ್ನೋಟಿಕರ್ ಎಸಿಬಿಗೆ ದೂರು ದಾಖಲಿಸಿದ್ದರು. ಅದರಂತೆ ಇಂದು ಆಸ್ಪತ್ರೆಯಲ್ಲಿ 10 ಸಾವಿರ ಹಣ ಪಡೆಯುವಾಗ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ಹಣದ ಸಹಿತ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಎಸಿಬಿ ಡಿವೈಎಸ್ ಪಿ ಗಿರೀಶ್ ನೇತೃತ್ವದಲ್ಲಿ ದಾಳಿ ನಡೆದಿದೆ. ಅಧಿಕಾರಿಗಳು ಪಾವಸ್ಕರ್ ಅವರ ಕಚೇರಿಯಲ್ಲಿ ಇತರ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.