ಕಾರವಾರ:ನಗರಸಭೆ ರಸ್ತೆಯೊಂದನ್ನು ಕಾಂಕ್ರೀಟಿಕರಣಗೊಳಿಸಲು ಮುಂದಾದಾಗ ಕುಟುಂಬವೊಂದು ಅಡ್ಡಿಪಡಿಸಿ ಮಹಿಳೆಯೋರ್ವಳು ರಸ್ತೆಯಲ್ಲಿ ಮಲಗಿ ವಿರೋಧ ವ್ಯಕ್ತಪಡಿಸಿದ ಘಟನೆ ನಗರದ ಡೌನ್ ಚರ್ಚ್ ಬಳಿ ನಡೆದಿದೆ.
ರಸ್ತೆ ನಿರ್ಮಾಣಕ್ಕೆ ವಿರೋಧ: ರಸ್ತೆಯಲ್ಲಿ ಮಲಗಿ ಮಹಿಳೆ ಪ್ರತಿಭಟನೆ
ರಸ್ತೆ ಇರುವ ಜಾಗ ತಮ್ಮದೆಂದು ಕೋರ್ಟ್ ಮೊರೆ ಹೋಗಿದ್ದ ರಸ್ತೆ ಬದಿ ಕುಟುಂಬವೊಂದು ಇದೀಗ ತೆಗೆದುಕೊಂಡ ಅವಧಿ ಮುಗಿದ ಹಿನ್ನೆಲೆಯಲ್ಲಿ ನಗರಸಭೆ ಅಧಿಕಾರಿಗಳು ರಸ್ತೆ ಕಾಂಕ್ರೀಟಿಕರಣಕ್ಕೆ ಮುಂದಾಗಿದ್ದು, ಕುಟುಂಬದ ಮಹಿಳೆಯರು ತೀವ್ರ ವಿರೋಧ ವ್ಯಕ್ತಪಡಿಸಿರುವ ಘಟನೆ ನಡೆದಿದೆ.
ಕೋಡಿಭಾಗ ರಸ್ತೆಯಿಂದ ಡೌನ್ ಚರ್ಚ್ ಮುಂಭಾಗ ಹಾದು ಹೋಗುವ ಟಾರ್ ರಸ್ತೆ ಹದಗೆಟ್ಟ ಹಿನ್ನೆಲೆಯಲ್ಲಿ ನಗರಸಭೆ ಅನುದಾನದಡಿ 100 ಮೀ. ಕಾಂಕ್ರೀಕರಣಗೊಳಿಸಲಾಗುತ್ತಿತ್ತು. ಆದರೆ ರಸ್ತೆ ಇರುವ ಜಾಗ ತಮ್ಮದೆಂದು ಕೋರ್ಟ್ ಮೊರೆ ಹೋಗಿದ್ದ ರಸ್ತೆ ಬದಿ ಕುಟುಂಬವೊಂದು 15 ದಿನಗಳ ಕಾಲಾವಕಾಶವನ್ನು ತೆಗೆದುಕೊಂಡಿತ್ತು. ಆದರೆ ಇದೀಗ ತೆಗೆದುಕೊಂಡ ಅವಧಿ ಮುಗಿದ ಹಿನ್ನೆಲೆಯಲ್ಲಿ ನಗರಸಭೆ ಅಧಿಕಾರಿಗಳು ರಸ್ತೆ ಕಾಂಕ್ರೀಟಿಕರಣಕ್ಕೆ ಮುಂದಾಗಿದ್ದು, ಕುಟುಂಬದ ಮಹಿಳೆಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ಅಲ್ಲದೆ ಮಹಿಳೆಯೋರ್ವಳು ರಸ್ತೆಯಲ್ಲಿ ಮಲಗಿ ಕಾಮಗಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕೊನೆಗೆ ಮಹಿಳೆಯನ್ನು ಪೊಲೀಸರು ಹಾಗೂ ನಗರಸಭೆ ಸಿಬ್ಬಂದಿ ರಸ್ತೆ ಬದಿ ಮಲಗಿಸಿ ಕಾಮಗಾರಿ ಮುಂದುವರೆಸಿದ್ದಾರೆ. ಈ ಬಗ್ಗೆ ಮಾತನಾಡಿದ ನಗರಸಭೆ ಸಹಾಯಕ ಎಂಜಿನಿಯರ್, ಈ ಹಿಂದೆ ಇದ್ದ ರಸ್ತೆಯನ್ನೇ ಅಭಿವೃದ್ಧಿ ಪಡಿಸಲಾಗುತ್ತಿದೆ. ಆದರೆ ಕುಟುಂಬದವರು ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿದ್ದು, ಕಾಮಗಾರಿ ನಡೆಸಲು ಯಾವುದೇ ತಡೆಯಾಜ್ಞೆ ಇಲ್ಲದ ಕಾರಣ ಕಾನೂನಿನಂತೆ ರಸ್ತೆ ಅಭಿವೃದ್ಧಿಪಡಿಸಲಾಗುತ್ತಿದೆ. ಆದರೆ ಅವರು ಅಪೀಲ್ ಹೋಗಿರುವುದಾಗಿ ಹೇಳುತ್ತಿದ್ದಾರೆ. ಆದರೆ ನಾವು ಈ ಹಿಂದಿನ ರಸ್ತೆಯನ್ನು ಅಭಿವೃದ್ಧಿಪಡಿಸುತ್ತಿದ್ದೇವೆಯೇ ವಿನಾ ಹೊಸದಾಗಿ ರಸ್ತೆ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.