ಕಾರವಾರ: ಅವರಿಬ್ಬರು ಪ್ರೀತಿಸಿ ಮದುವೆಯಾಗಿದ್ದ ಜೋಡಿ. ಇಬ್ಬರ ಪ್ರೀತಿಗೆ ಸಾಕ್ಷಿವೆಂಬಂತೆ ಎರಡು ಮುದ್ದಾದ ಹೆಣ್ಣುಮಕ್ಕಳನ್ನು ಪಡೆದಿದ್ದರು. ಆರು ವರ್ಷದಿಂದ ಸಂಸಾರ ನಡೆಸುತ್ತಿದ್ದ ಪತಿ, ಕಳೆದೊಂದು ವರ್ಷದ ಹಿಂದೆ ಕೆಲಸಕ್ಕೆ ಹೋಗಿ ಬರುವುದಾಗಿ ಹೇಳಿ ತೆರಳಿದವರು ಮರಳಿ ಬಾರದೆ ನಾಪತ್ತೆಯಾಗಿದ್ದಾರೆ. ಪತಿಯನ್ನು ಹುಡುಕಿ ಕೊಡುವಂತೆ ಕಳೆದೊಂದು ವರ್ಷದಿಂದ ಪೊಲೀಸ್ ಠಾಣೆಗಳಿಗೆ ಅಲೆದು ಸಾಕಾಗಿರುವ ಪತ್ನಿ ಇದೀಗ ಜಿಲ್ಲಾಡಳಿತದ ಮೊರೆ ಹೋಗಿದ್ದಾರೆ.
ಕಾರವಾರ ತಾಲೂಕಿನ ಹಾರವಾಡ ಮೂಲದ ಮನೋಜ್ ಪೆಡ್ನೇಕರ್ (33) ನಾಪತ್ತೆಯಾದ ನೌಕರ. ಕಾರವಾರ ನೌಕಾನೆಲೆಯಲ್ಲಿ ಖಾಯಂ ನೌಕರನಾಗಿ ಕಳೆದ 10 ವರ್ಷದಿಂದ ಕೆಲಸ ನಿರ್ವಹಿಸುತ್ತಿದ್ದ ಇವರು ಬೈತಖೋಲ ಮೂಲದ ರೇಷ್ಮಾ ಪೆಡ್ನೇಕರ್ ಎಂಬ ಯುವತಿಯನ್ನು 7 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಅಲ್ಲದೇ, ದಂಪತಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಆದರೆ, ಎರಡನೇ ಮಗು ಜನಿಸಿ ಆರು ತಿಂಗಳಾಗಿರುವ ವೇಳೆಗೆ ಪತಿ ನಾಪತ್ತೆಯಾಗಿದ್ದು, ಈವರೆಗೂ ಪತ್ತೆಯಾಗಿಲ್ಲ. ನೌಕಾನೆಲೆಯಲ್ಲಿ ಕೆಲಸಕ್ಕೆ ತೆರಳುವುದಾಗಿ ಹೇಳಿ ಹೋದವನು ಮರಳಿ ಬಾರದ ಹಿನ್ನೆಲೆಯಲ್ಲಿ ಆತನ ಪತ್ನಿ ಹಾಗೂ ತಾಯಿ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ 2022ರ ಜುಲೈ 25 ರಂದು ದೂರು ದಾಖಲಿಸಿದ್ದಾರೆ.
ಅಮದಳ್ಳಿಯ ಬಾಡಿಗೆ ಮನೆಯಲ್ಲಿದ್ದಾಗ ಒಂದೂವರೆ ತಿಂಗಳಿಂದ ಕೆಲಸಕ್ಕೆ ತೆರಳದೇ ಇದ್ದವರು 2022 ರ ಜುಲೈ 18 ರಂದು ಬೆಳಗ್ಗೆ 8 ಗಂಟೆಗೆ ಕೆಲಸಕ್ಕೆ ತೆರಳುವುದಾಗಿ ಹೇಳಿ ಹೋಗಿದ್ದರು. ಎರಡು ದಿನದ ಬಳಿಕ ಕರೆ ಮಾಡಿ ತಾನು ಮುಂದಿನ ವಾರ ಬರುವುದಾಗಿ ತಿಳಿಸಿದ್ದರು. ಎಲ್ಲಿಗೆ ತೆರಳುತ್ತಿರುವುದಾಗಿ ಪ್ರಶ್ನಿಸಿದಾಗಲು ಏನೂ ಹೇಳದೆ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದು, ಈವರೆಗೆ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ದೂರಿನಲ್ಲಿ ನಮೂದಿಸಿದ್ದಾರೆ.