ಕರ್ನಾಟಕ

karnataka

ETV Bharat / state

ಅಂಕೋಲಾದಲ್ಲಿ ವಿಶಿಷ್ಟ ಆಚರಣೆ : ಆಯಾಸ ತಣಿಯಲು ಜಲಕ್ರೀಡೆಯಾಡುವ ದೇವರು - ankola festival, A unique ritual practised

ಅಂಕೋಲಾದ ವೆಂಕಟರಮಣ ದೇವರು ಉತ್ಸವ ಮುಗಿಸಿ ಬೇಟೆಯಾಟ ಆಡಿದ ಬಳಿಕ ತಾಲೂಕಿನ ಬೊಬ್ರುವಾಡ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಬೆಳಾಬಂದರ್ ಗ್ರಾಮದ ಹಳ್ಳಕ್ಕೆ ಜಲಕ್ರೀಡೆಗೆ ತೆರಳುವ ಆಚರಣೆ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ..

a-unique-ritual-in-ankola-karwar
ಅಂಕೋಲಾದಲ್ಲಿ ವಿಶಿಷ್ಟ ಆಚರಣೆ : ಆಯಾಸ ತಣಿಯಲು ಜಲಕ್ರೀಡೆಯಾಡುವ ದೇವರು

By

Published : Apr 19, 2022, 11:35 AM IST

ಕಾರವಾರ : ಅಂಕೋಲಾ ತಾಲೂಕಿನ ದೊಡ್ಡ ದೇವರೆಂದೇ ಹೆಸರಾಗಿರುವ ವೆಂಕಟರಮಣ ದೇವರ ತೇರು ಉತ್ಸವವು ಜಲಕ್ರೀಡೆಯಾಡುವುದರೊಂದಿಗೆ ಸಂಪನ್ನಗೊಂಡಿದೆ. ಕಳೆದೆರಡು ದಿನಗಳಿಂದ ನಡೆಯುತ್ತಿರುವ ಸಣ್ಣ ತೇರು ಉತ್ಸವದೊಂದಿಗೆ ಹನುಮ ಜಯಂತಿ ಪ್ರಯುಕ್ತ ಸಾವಿರಾರು ಭಕ್ತರ ಕೂಡುವಿಕೆಯಲ್ಲಿ ದೊಡ್ಡ ತೇರು ಪಟ್ಟಣದ ರಥ ಬೀದಿಯಲ್ಲಿ ಮೆರವಣಿಗೆ ಸಾಗಿ ಉತ್ಸವ ಸಂಪನ್ನಗೊಂಡಿದೆ.‌ ಉತ್ಸವ ಮುಗಿಸಿ ಬೇಟೆಯಾಟ ಆಡುವುದರೊಂದಿಗೆ ಆಯಾಸಗೊಂಡ ದೇವರು ತಾಲೂಕಿನ ಬೊಬ್ರುವಾಡ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಬೆಳಾಬಂದರ್ ಗ್ರಾಮದ ಹಳ್ಳಕ್ಕೆ ಜಲಕ್ರೀಡೆಗೆ ತೆರಳುವ ಆಚರಣೆ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ.

ಅಂಕೋಲಾದಲ್ಲಿ ವಿಶಿಷ್ಟ ಆಚರಣೆ, ಆಯಾಸ ತಣಿಯಲು ಜಲಕ್ರೀಡೆಯಾಡುವ ದೇವರು..

ಬೆಳಾಬಂದರ್ ಗ್ರಾಮದ ಪ್ರಮುಖರು ದೊಡ್ಡ ತೇರಿನ ಮರುದಿನ ವೆಂಕಟರಮಣ ದೇವಸ್ಥಾನಕ್ಕೆ ತೆರಳಿ ವೀಳ್ಯ ನೀಡಿ ಜಲಕ್ರೀಡೆಗೆ ಆಮಂತ್ರಿಸುವುದು ಪದ್ಧತಿ. ಬಳಿಕ ದೇವಸ್ಥಾನದಿಂದ ಪಲ್ಲಕ್ಕಿಯ ಮೂಲಕ ದೇವರನ್ನು ಹಳ್ಳದ ದಡಕ್ಕೆ ಕರೆತರುತ್ತಾರೆ. ಹಾಗೆಯೇ ದೇವಸ್ಥಾನದ ಧರ್ಮದರ್ಶಿಗಳನ್ನೊಳಗೊಂಡಂತೆ ಅಲಂಕೃತಗೊಂಡ ದೋಣಿಯಲ್ಲಿ ವಿರಾಜಮಾನನಾಗುವ ವೆಂಕಟರಮಣ ದೇವರು ಜಲಮಾರ್ಗದಿಂದ ನದಿ-ಸಮುದ್ರ ಸಂಗಮ ಪ್ರದೇಶವಾದ ಗಾಬಿತಕೇಣಿಗೆ ತೆರಳಿ ಅಲ್ಲಿಯ ಮೀನುಗಾರ ಸಮಾಜದವರಿಂದ ಪೂಜೆಯನ್ನು ಸ್ವೀಕರಿಸಿ ಮತ್ತೆ ಬೆಳಾಬಂದರ ಹಳ್ಳದ ತೀರದಲ್ಲಿ ಬಂದು ಕುಳಿತುಕೊಳ್ಳುವ ವೆಂಕಟರಮಣ ದೇವರನ್ನು ನೋಡಲು ಭಕ್ತ ಸಾಗರವೇ ಹರಿದು ಬರುತ್ತದೆ.

ನಂತರ ಹಣ್ಣು-ಕಾಯಿ ಮಾಡಿ ಮಂಗಳಾರತಿ ನಡೆದು ಪ್ರಸಾದ ವಿತರಿಸಲ್ಪಪಡುತ್ತದೆ. ತದನಂತರದಲ್ಲಿ ತಳಿರು, ತೋರಣಗಳಿಂದ ಶೃಂಗರಿಸಿದ ದಾರಿಯಲ್ಲಿ ಪಲ್ಲಕ್ಕಿಯ ಮೇಲೆ ಆರತಿಗಳನ್ನು ಸ್ವೀಕರಿಸುತ್ತ ಸಾಗುವ ದೇವರು, ಪಳ್ಳಿಕೇರಿಯ ಪಿರ್‌ಶೆಟ್ಟಿ ಕಟ್ಟೆಯಲ್ಲಿ ಕುಳಿತು ಕೆಲ ಕಾಲ ವಿಶ್ರಮಿಸಿ ಅಲ್ಲಿಯ ಭಕ್ತಾದಿಗಳಿಂದ ಸೇವೆಯನ್ನು ಪಡೆದುಕೊಳ್ಳುತ್ತಾನೆ. ನಂತರದಲ್ಲಿ ಮುಂದೆ ಸಾಗಿ ಆಸ್ಥಾನದಲ್ಲಿ ವಿರಾಜಮಾನನಾದ ಮೇಲೆ ಉತ್ಸವವು ಮುಗಿಯುವುದು. ಈ ಉತ್ಸವಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಾರೆ.

ಓದಿ :ತ್ರಿಪುರದಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆ.. 63 ಹಂದಿಗಳು ಸಾವು

ABOUT THE AUTHOR

...view details