ಭಟ್ಕಳ: ಅನಾರೋಗ್ಯದಿಂದ ಸಾವನ್ನಪ್ಪಿದ ತಾಲೂಕಿನ ವೆಂಕಟಾಪುರ ನೀಲಕಂಠದ ಜಿ.ಎಸ್.ಪಿ ಮುಖಂಡರು ಹಾಗೂ ಉದ್ಯಮಿಯೊಬ್ಬರು ನೇತ್ರದಾನ ಮಾಡುವ ಮೂಲಕ ಸಾವಿನಲ್ಲಿಯೂ ಸಾರ್ಥಕತೆ ಮೆರೆದಿದ್ದಾರೆ. ಅಶೋಕ ಕಾಮತ್ (67) ನೇತ್ರದಾನ ಮಾಡಿದವರು.
ಅಶೋಕ ಕಾಮತ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಕಳೆದ 15 ದಿನಗಳಿಂದ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ನಿನ್ನೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಇವರು ನೀಲಕಂಠ ಸಾರ್ವಜನಿಕ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ತಮ್ಮದೇ ಆದ ದೇಣಿಗೆಯ ಜೊತೆಗೆ ಸಂಪೂರ್ಣ ಸಹಕಾರ ನೀಡುತ್ತಿದ್ದರು ಹಾಗೂ ನೀಲಕಂಠ ಹಾಗೂ ಶಿರಾಲಿ ಕಂಡಂತಹ ಅತ್ಯಂತ ಸರಳ ಸಜ್ಜನ ಸಮಾಜ ಸೇವಕರಾಗಿದ್ದರು. ಇವರ ಸಾವಿನ ಬಳಿಕ ಉಡುಪಿಯ ಪ್ರಸಾದ ನೇತ್ರಾಲಯದ ವೈದ್ಯರಾದ ಹಂಸ, ಅಹನ್ ಹಾಗೂ ಸಿಬ್ಬಂದಿ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಆಗಮಿಸಿ ಪ್ರಕ್ರಿಯೆ ಪೂರ್ಣಗೊಳಿಸಿದರು.
ಈ ಬಗ್ಗೆ ಮೃತರ ಸಹೋದರರಾದ ಶಿವಾನಂದ ಕಾಮತ್ ಮಾತನಾಡಿ, "ನನ್ನ ಸಹೋದರ ದಾನ - ಧರ್ಮ ಮಾಡುವುದರಲ್ಲಿ ಮುಂಚೂಣಿಯಲ್ಲಿದ್ದರು. ನಮ್ಮ ಊರಿನಲ್ಲಿ ನಡೆದ ಒಂದು ಸಮಾರಂಭದಲ್ಲಿ ನಮ್ಮ ಕುಟುಂಬದ ಎಲ್ಲರೂ ನೇತ್ರದಾನ ಮಾಡಲು ಅರ್ಜಿ ತುಂಬಿದ್ದೇವೆ. ಕಳೆದ 15 ದಿನಗಳ ಹಿಂದಷ್ಟೇ ನನ್ನ ಸಹೋದರ ತಾವು ಸಾವನ್ನಪ್ಪಿದ ಮೇಲೆ ಅವರ ಕಣ್ಣನ್ನು ದಾನ ಮಾಡುವಂತೆ ಹೇಳಿದ್ದರು. ಅವರ ಆಸೆಯಂತೆ ಇಂದು ಕಣ್ಣನು ದಾನ ಮಾಡಿದ್ದೇವೆ" ಎಂದರು.